ಜನಾರ್ದನ ರೆಡ್ಡಿ ಚುನಾವಣೆಗೆ ನಿಂತ್ರೆ ಗೆಲ್ಲೊಕ್ಕೆ ಬಿಡಬೇಡಿ: ಜನರಿಗೆ ಸಾಮಾಜಿಕ ಕಾರ್ಯಕರ್ತನ ಕರೆ
ರಾಯಚೂರು, ಫೆಬ್ರವರಿ 07: ಜನಾರ್ದನ ರೆಡ್ಡಿ ಮತ್ತೆ ಜನಪ್ರತಿನಿಧಿಯಾಗದಂತೆ ಜನರು ನೋಡಿಕೊಳ್ಳಬೇಕು. ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಜನರೇ ಅವರಿಗೆ ಸರಿಯಾದ ಪಾಠವನ್ನು ಕಲಿಸಬೇಕು. ಜನರು ರೆಡ್ಡಿ ಗೆಲ್ಲಲು ಅವಕಾಶ ಮಾಡಿಕೊಡಬಾರದು," ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ ಕರೆ ನೀಡಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ, "ಜನಾರ್ದನ ರೆಡ್ಡಿ ಮಹಾಭ್ರಷ್ಟ ವ್ಯಕ್ತಿ. ಅವರು ಮಾಡಿದ ಭ್ರಷ್ಟಾಚಾರದ ಹಣವನ್ನು ವಾಪಾಸ್ ಪಡೆಯುವ ಕಾರ್ಯ ಇನ್ನೂ ಕೂಡಾ ಪೂರ್ತಿಯಾಗಿಲ್ಲ. ಹೀಗಿರುವಾಗ ಜನರು ಈ ಭ್ರಷ್ಟ ಚುನಾವಣೆಗೆ ನಿಂತ್ರೆ ಗೆಲ್ಲೊಕ್ಕೆ ಬಿಡಬೇಡಿ," ಎಂದು ಮನವಿ ಮಾಡಿದ್ದಾರೆ.
"ಜನಾರ್ದನ ರೆಡ್ಡಿ ಸುಮಾರು 40 ಸಾವಿರ ಕೋಟಿ ರೂಪಾಯಿ ಅಕ್ರಮ ಸಂಪಾದನೆ ಹಣವು ಇನ್ನೂ ಕೂಡಾ ಹಿಂದಕ್ಕೆ ಬಂದಿಲ್ಲ. ಆ ಬಗ್ಗೆ ಸರ್ಕಾರ ಯಾವ ಗೋಜಿಗೂ ಹೋಗುತ್ತಿಲ್ಲ. ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಜನಾರ್ದನ ರೆಡ್ಡಿ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ಕೂಡಾ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ," ಎಂದು ಆರೋಪ ಮಾಡಿದ್ದಾರೆ.

"ಈ ಭ್ರಷ್ಟ, ಅನೈತಿಕ ವ್ಯಕ್ತಿಗೆ ಜನರು ಸರಿಯಾದ ಪಾಠವನ್ನು ಕಲಿಸಬೇಕು. ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರೆ ಗೆಲ್ಲಲು ಅವಕಾಶ ಮಾಡಿಕೊಡಬಾರದು," ಎಂದು ಹೇಳಿರುವ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ, "ಜನಾರ್ದನ ರೆಡ್ಡಿ ತನ್ನ ಉಳಿದ ಜೀವನವನ್ನು ಒಳ್ಳೆಯ ದಾರಿಯಲ್ಲಿ ನಡೆಯುವ ಯತ್ನವನ್ನು ಮಾಡಬೇಕು," ಎಂದು ತಿಳಿಸಿದ್ದಾರೆ.
ಜನಾಂದೋಲನ ಮಹಾ ಮೃತ್ರಿಯಿಂದ ಯಾತ್ರೆ
ಈ ಸಂದರ್ಭದಲ್ಲೇ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ, "ಮಾರ್ಚ್ 1 ರಿಂದ ರಾಜ್ಯ ಸರ್ಕಾರದ 3 ಕರಾಳ ಹಿಂಪಡೆಯುವ ಹಾಗೂ ಎಂಎಸ್‍ಪಿಗೆ ಕಾನೂನಾತ್ಮಕವಾಗಿ ಖಚಿತತೆ ನೀಡಬೇಕು ಎಂದು ಆಗ್ರಹ ಮಾಡಿ ಜನಾಂದೋಲನ ಮಹಾ ಮೃತ್ರಿಯಿಂದ ಯಾತ್ರೆ ನಡೆಸಲಾಗುತ್ತದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯಬೇಕು. ಈ ಎಲ್ಲಾ ವಿಚಾರದಲ್ಲಿ ಯಾತ್ರೆಯನ್ನು ನಡೆಸಲಾಗುತ್ತದೆ. ಬಸವಕಲ್ಯಾಣದಿಂದ ಬೆಂಗಳೂರು, ಮಲೆಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಯಾತ್ರೆ ನಡೆಯಲಿದೆ," ಎಂದು ಮಾಹಿತಿ ನೀಡಿದ್ದಾರೆ.
ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಎಂಟ್ರಿ?
ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರಾ ಎಂಬ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಬಿಜೆಪಿ ಪುನರ್ ಪ್ರವೇಶಕ್ಕೆ ಬಿಜೆಪಿ ವರಿಷ್ಠರು ಅನುಮತಿ ನೀಡುವುದು ಮಾತ್ರ ಅನುಮಾನವಾಗಿದೆ. ಚುನಾವಣೆಗೆ ಹದಿನಾಲ್ಕು ತಿಂಗಳು ಇರುವ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಪೂರ್ವ ತಯಾರಿಯನ್ನು ಆರಂಭಿಸಿದೆ. ಬಿಜೆಪಿಯೂ ಸಂಪುಟ ವಿಸ್ತರಣೆ/ನಿಗಮ ಮಂಡಳಿ ನೇಮಕ ಮುಂತಾದ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ನಡುವೆ ಜನಾರ್ಧನ ರೆಡ್ಡಿ ತಮ್ಮ ಜಿಗರ್ ದೋಸ್ತ್ ಶ್ರೀರಾಮುಲು ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಹರಸಾಹಸ ಪಡುತ್ತಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications