ರಾಯಚೂರು ವಿದ್ಯಾರ್ಥಿನಿ ಸಾವು : ಆರೋಪಿಯನ್ನು ವಶಕ್ಕೆ ಪಡೆದ ಸಿಐಡಿ
ರಾಯಚೂರು, ಏಪ್ರಿಲ್ 27 : ರಾಯಚೂರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ರಾಜ್ಯಾದ್ಯಂತ ವಿದ್ಯಾರ್ಥಿನಿ ಸಾವಿನ ಬಗ್ಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ.
ಸಿಐಡಿ ಪೊಲೀಸರು ಆರೋಪಿ ಸುದರ್ಶನ್ ಯಾಧವ್‌ನನ್ನು 4 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಿಐಡಿ ಎಸ್ಪಿ ಡಾ.ಶರಣಪ್ಪ ಅವರು ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಸುದರ್ಶನ್ ಯಾಧವ್ ವಿಚಾರಣೆ ವೇಳೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ತನಗೆ ಪರಿಚಯ ಇದ್ದಳು. ಪ್ರೀತಿಸುವಂತೆ ಅವಳನ್ನು ಪೀಡಿಸಿದ್ದೆ. ಆದರೆ, ಆಕೆಯ ಸಾವಿನಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಸಿಐಡಿ ಪೊಲೀಸರು ಮುಂದಿನ ತನಿಖೆಗಾಗಿ ಆಟಾಪ್ಸಿ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಎದರು ನೋಡುತ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ವಿದ್ಯಾರ್ಥಿನಿ ಶವ ಸಿಕ್ಕಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಏಪ್ರಿಲ್ 13ರಂದು ಪರೀಕ್ಷೆ ಬರೆಯಲು ಹೋಗಿದ್ದಳು, ಬಳಿಕ ನಾಪತ್ತೆಯಾಗಿದ್ದಳು. ಏಪ್ರಿಲ್ 16ರಂದು ಆಕೆಯ ಶವ ಕಾಲೇಜಿನಿಂದ 4 ಕಿ.ಮೀ.ದೂರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಮಾಡಲಾಗುತ್ತಿದೆ.












Click it and Unblock the Notifications