ರಾಯಚೂರಿನಲ್ಲಿ ಗುಂಡಿಮಯ ರಸ್ತೆಗಳು; ಸರ್ಕಾರದ ವಿರುದ್ಧ ಜನಾಕ್ರೋಶ
ರಾಯಚೂರು, ಜುಲೈ, 24: ರಾಯಚೂರು ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು, ನಿತ್ಯವೂ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಇದೀಗ ಗುಂಡಿಬಿದ್ದ ರಸ್ತೆಗಳ ಚಿತ್ರಗಳು ವೈರಲ್ ಆಗಿದ್ದು, ದುರಸ್ತಿ ಮಾಡಿಸದ ಕಾರಣ ಬಿಜೆಪಿ ಸರ್ಕಾರದ ವಿರುದ್ಧ ಜನರು ಕೆಂಡಕಾರುತ್ತಿದ್ದಾರೆ.
ಪ್ರಪ್ರಥಮ ಬಾರಿಗೆ ನಗರದಲ್ಲಿ 5 ಇಂಜಿನ್ ಬಿಜೆಪಿ ಆಡಳಿತ ಇದ್ದರೂ, ಜನ ಸಾಮಾನ್ಯರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ. ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದೇವೆ ಎಂದು ಅಲ್ಲಿನ ಜನರು ಅಸಮಾಧಾನ ಹೊರಹಾಕಿದ್ದಾರೆ. ಹದಗೆಟ್ಟ ರಸ್ತೆಗಳಲ್ಲಿ ಪ್ರತಿನಿತ್ಯವು ತೊಂದರೆ ಅನುಭವಿಸುವಂತಾಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿಗೆ ಅನುಕೂಲವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಾದ ಒಂದೆಡೆಯಾದರೆ, ನಗರದಲ್ಲಿ 5 ಇಂಜಿನ್ ಸರ್ಕಾರವಿದ್ದರೂ ಸಮಸ್ಯೆಗಳು ಮಾತ್ರ ಆಗುತ್ತಲೇ ಇವೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಸಂಸದ ಅಮರೇಶ್ವರ ನಾಯಕ, ವಿಧಾನಸಭಾ ಕ್ಷೇತ್ರದಿಂದ ಶಾಸಕ ಡಾ.ಶಿವರಾಜ ಪಾಟೀಲ್ ಇದ್ದರೆ, ನಗರಸಭೆಯಲ್ಲಿ ಬಿಜೆಪಿ ಅಧಿಕಾರ, ರಾಜ್ಯದಲ್ಲೂ ಬಿಜೆಪಿ ಸರ್ಕಾರ, ಕೇಂದ್ರದಲ್ಲೂ ಬಿಜೆಪಿ ಅಧಿಕಾರ ನಡೆಸುತ್ತಿದೆ. ಇದನ್ನು ಆಧರಿಸಿ ಅಲ್ಲಿನ ಜನರು 5 ಇಂಜಿನ್ ಸರ್ಕಾರ ಎಂದು ಕರೆದು ವಾಗ್ದಾಳಿ ನಡೆಸಿದ್ದಾರೆ. ಹದಗೆಟ್ಟ ರಸ್ತೆಗಳ ಪರಿಸ್ಥಿತಿ ಬಗ್ಗೆ ಸಂಸದ, ಶಾಸಕರು ಮತ್ತು ಸರ್ಕಾರವನ್ನು ಸಮರ್ಥವಾಗಿ ಪ್ರಶ್ನಿಸುವಲ್ಲಿ ವಿಫಲರಾಗಿದ್ದಾರೆ. ವಿರೋಧ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳು ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿಲ್ಲ. ಇದರಿಂದ ಕೊನೆಗೆ ಬೇಸತ್ತ ಜನ ಸಾಮಾನ್ಯರು ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿ ಬಳಸಿಕೊಂಡು ಆಡಳಿತ, ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಭರವಸೆಗಳ ಗೂಡಾದ ರಸ್ತೆ ದುರಸ್ತಿ :ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯ ಮುಂಭಾಗದಿಂದ ಯಕ್ಲಾಸಪೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಅರಬ್ ಮೊಹಲ್ಲಾದಿಂದ ಯಕ್ಲಾಸಪೂರಿಗೆ ಹಾದು ಹೋಗುವ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವ ಜನರು, ವಾಹನ ಸವಾರರಿಗೆ ನಿತ್ಯವೂ ತಪ್ಪಿದ್ದಲ್ಲ ಗೋಳು ಎನ್ನುವಂತಾಗಿದೆ. ಇದು ಒಂದು ಎರಡು ವರ್ಷದ ಕತೆಯಲ್ಲ, ಮೂರು ನಾಲ್ಕು ವರ್ಷಗಳಿಂದ ಬರೀ ಭರವಸೆಗಳನ್ನು ಕೊಡುತ್ತಾ ರಸ್ತೆ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಕ್ಲಾಸಪೂರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಜಿಲ್ಲಾಡಳಿತ ಭವನದ ರಸ್ತೆಯನ್ನಾಗಿ ಗುರುತಿಸಲಾಗುತ್ತದೆ. ಈ ಹಿಂದೆಯಷ್ಟೇ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಇದೀಗ ರಸ್ತೆಗೆ ಹಾಕಿದ್ದ ಡಾಂಬರ್ ಕಾಣಿಸದಂತಾಗಿದ್ದು, ಎಲ್ಲಿ ನೋಡಿದರೂ ಬರೀ ಗುಂಡಿಗಳೇ ಕಾಣಿಸುತ್ತಿವೆ. ಗುಂಡಿಬಿದ್ದ ರಸ್ತೆಗಳ ಬಗ್ಗೆ ಅಲ್ಲಿನ ಸ್ಥಳೀಯರಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿವೆ. ಎಚ್ಚೆತ್ತುಕೊಳ್ಳದ ಸಂಸದರು, ಶಾಸಕರು ಮತ್ತು ಜಿಲ್ಲಾಡಳಿತದ ವಿರುದ್ಧವೂ ಆಕ್ರೋಶ ಜ್ವಾಲೆಗಳು ಹೆಚ್ಚಾಗಿವೆ.
ಅನುದಾನದ ಬಗ್ಗೆ ಪ್ರಶ್ನೆ ಎತ್ತಿದ ಸ್ಥಳೀಯರು: ರಸ್ತೆ ಕಾಮಗಾರಿಗೆ ಸರ್ಕಾರದಿಂದ ಅನುದಾನ ಬಂದಿದೆ ಎಂದು ಭಾಷಣಗಳಲ್ಲಿ ಅಲ್ಲಿನ ಸಂಸದ, ಶಾಸಕರು ಹೇಳಿಕೊಂಡಿದ್ದರು. ಆದರೆ ಇದುವರೆಗೂ ರಸ್ತೆ ದುರಸ್ತಿ ಮಾಡುವ ಕೆಲಸಗಳು ಯಾಕೆ ಆಗುತ್ತಿಲ್ಲ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಗುಂಡಿಬಿದ್ದ ರಸ್ತೆಗಳಿಂದ ಜನರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರೂ, ಇಲ್ಲಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಲೆ ಹಾಕದೆ ಇರುವುದು ಸರಿಯಲ್ಲ. ರಸ್ತೆ ಕಾಮಗಾರಿಗೆ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದೆ. ನಗರದಲ್ಲಿ ಶೇಕಡಾ 50ರಷ್ಟು ರಸ್ತೆಗಳು ಹದಗೆಟ್ಟಿದ್ದರೂ ದುರಸ್ತಿ ಮಾಡುತ್ತಿಲ್ಲ. ಹಾಗಾದರೆ ಸರ್ಕಾದಿಂದ ಬಂದ ಅನುದಾನ ಏನಾಯಿತು? ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತಿವೆ.

ವಿಪಕ್ಷದವರ ಮೌನದ ಬಗ್ಗೆ ಸ್ಥಳೀಯರ ಅನುಮಾನ: ಈ ಹಿಂದೆ ಕಲುಷಿತ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಂಘ, ಸಂಸ್ಥೆಗಳು ಮತ್ತು ವಿರೋಧ ಪಕ್ಷಗಳು ಹೋರಾಟವನ್ನು ಮಾಡಿದ್ದರು. ಆದರೆ ರಸ್ತೆಗಳನ್ನು ದುರಸ್ತಿ ಮಾಡಿಸುವ ವಿಚಾರದಲ್ಲಿ ಮೌನವಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹದಗೆಟ್ಟ ರಸ್ತೆಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಜನರು ಅನುಭವಿಸುತ್ತಿರುವ ನರಕಯಾತನೆ ಜನಪ್ರತಿನಿಧಿಗಳ ಕಣ್ಣಿಗೆ ಕಾಣುವುದಿಲ್ಲವೇ? ಎಂದು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಶಾಲಾ, ಕಾಲೇಜುಗಳ ಮಕ್ಕಳು ಸೇರಿದಂತೆ ಬಹುತೇಕರು ಈ ರಸ್ತೆಗಳಲ್ಲಿ ಓಡಾಟ ಮಾಡುತ್ತಿದ್ದು, ನಿತ್ಯವೂ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಕಾಮಗಾರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡಲಾಗುವುದೆಂದು ಅಲ್ಲಿನ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರುವುದರ ಮೂಲಕ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications