ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಗೆ ಹೆಚ್ಚಿದ ಆಗ್ರಹ: ಜನಾಕ್ರೋಶಕ್ಕೆ ಕಾರಣವಾದ ಜನಪ್ರತಿನಿಧಿಗಳ ಮಾತ್ರ ಮೌನ
ರಾಯಚೂರು, ಆಗಸ್ಟ್ 17: ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂಬ ಬಹುದಿನಗಳ ಒತ್ತಾಸೆ ಈಡೇರುವುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಕಾಂಗ್ರೆಸ್ ಶಾಸಕರು ತಮ್ಮಲ್ಲಿರುವ ಅಸಮಾಧಾನ ಬದಿಗಿಟ್ಟು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಏಮ್ಸ್ ಸಂಸ್ಥೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಒತ್ತಾಯಿಸಿ ಮೇಲಿಂದ ಮೇಲೆ ಹೋರಾಟಗಳು, ಪ್ರತಿಭಟನೆ, ಧರಣಿ ಹಾಗೂ ಸತ್ಯಾಗ್ರಹಗಳು ನಡೆದಿವೆ. ನಡೆಯುತ್ತಲೂ ಇವೆ. ಈ ನಡುವೆ ಜಿಲ್ಲೆಯ ಆಗೊಮ್ಮೆ ಈಗೊಮ್ಮೆ ಶಾಸಕರು ಏಮ್ಸ್ ತಂದೇ ತರುತ್ತೇವೆ ಎಂದು ಸಭೆ ಹಾಗೂ ಸಮಾರಂಭಗಳಲ್ಲಿ ಹೇಳಿಕೆ ನೀಡುತ್ತಿದ್ದು, ಈ ಎಲ್ಲ ಹೇಳಿಕೆಗಳು ಬರೀ ವೇದಿಕೆಗೆ ಮಾತ್ರ ಸೀಮಿತವಾಗಿಯೇ ವಿನಹಃ ಅನುಷ್ಠಾನಕ್ಕೆ ಬರುತ್ತಿಲ್ಲ ಎಂಬ ಆರೋಪಗಳಿವೆ.

ಜಿಲ್ಲೆ ಕಾಂಗ್ರೆಸ್ ಜನಪ್ರತಿನಿಧಿಗಳ ಕಿತ್ತಾಟದಿಂದ ಜಿಲ್ಲೆಗೆ ಏಮ್ಸ್ ಮಂಜೂರಾತಿಗೆ ವಿಳಂಬವಾಗುತ್ತಿದೆ. ಈ ನಡುವೆ ಪಕ್ಕದ ಕಲಬುರಗಿ ಜಿಲ್ಲೆಯ ಸಚಿವರುಗಳು ಮಾತ್ರ ಏಮ್ಸ್ ಅನ್ನು ಕಲಬುರಗಿಯಲ್ಲಿಯೇ ಸ್ಥಾಪನೆ ಮಾಡಬೇಕು ಎಂಬ ಒತ್ತಡವನ್ನು ಕೇಂದ್ರದ ಮೇಲೆ ಹೇರುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ನಿರ್ಲಕ್ಷ್ಯ ಧೋರಣೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಿದೆ.
ಅಭಿವೃದ್ಧಿ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ 460ನೇ ದಿನಗಳಿಂದ ಏಮ್ಸ್ ಹೋರಾಟ ಸಮಿತಿಯಿಂದ ಅನಿರ್ದಿಷ್ಠಾವಧಿ ಧರಣಿ ನಡೆಯುತ್ತಿದೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರ ಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಗೆ ಏಮ್ಸ್ ಮಂಜೂರು ಮಾಡಿಸುತ್ತೇವೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇವರ ನಂತರ ಪ್ರಸ್ತುತ ಸಚಿವ ಪ್ರಿಯಾಂಕ ಖರ್ಗೆಯವರು ಕಲಬುರಗಿ ಇಲ್ಲವೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ದಿಗಿಲು ಉಂಟಾಗಿದೆ.
ಕಾಂಗ್ರೆಸ್ ನಾಯಕ ಎನ್.ಎಸ್.ಬೋಸರಾಜು ಅವರು ಯಾವುದೇ ಚುನಾವಣೆ ಎದುರಿಸಿಲ್ಲ. ಇಂತಹವರನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡಿರುವುದರಿಂದ ಜಿಲ್ಲೆಯ ಕಾಂಗ್ರೆಸ್ ಶಾಸಕರು ಏಮ್ಸ್ ಸ್ಥಾಪನೆ ಮಾಡುವ ವಿಷಯದಲ್ಲಿ ಮೌನ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023 ರ ಜು.17ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ .ಎಲ್. ಮಾಂಡವಿಯಾ ಅವರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಈವರೆಗೂ ಕೇಂದ್ರ ಸರಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ಇತ್ತೀಚಿನ ಸಂಸತ್ ಅಧಿವೇಶನದಲ್ಲಿ ಏಮ್ಸ್ ವಿಚಾರದ ಬಗ್ಗೆ ರಾಜ್ಯಸಭಾ ಸದಸ್ಯ ಲೆಹಾರ್ ಸಿಂಣ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಪ್ರಶ್ನೆ ಮಾಡಿದ್ದರೂ, ಗಂಭೀರ ಚರ್ಚೆಗಳು ನಡೆಯಲಿಲ್ಲ.
ಕರ್ನಾಟಕದಿಂದ ಕೇವಲ ಹುಬ್ಬಳ್ಳಿ -ಧಾರವಾಡದಲ್ಲಿ ಏಮ್ಸ್ ಸ್ಥಾಪನೆ ಮಾಡಲು ಕಳೆದ ಬಿಜೆಪಿ ಸರಕಾರದಿಂದ ಮಾತ್ರ ಪ್ರಸ್ತಾವನೆ ಬಂದಿದೆ. ಆದರೆ ಕೇಂದ್ರ ಸರಕಾರ ಇಲ್ಲಿಯವರೆಗೂ ಪ್ರಸ್ತಾವನೆಗೆ ಅನುಮೋದಿಸಿಲ್ಲ ಎಂದು ಲೋಕಸಭೆಗೆ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ .ಎಲ್. ಮಾಂಡವಿಯಾ ಉತ್ತರ ನೀಡಿದರು. ಹಾಗಾದರೆ ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಸಲ್ಲಿಸಿದ ಮನವಿ ಪತ್ರ ಎಲ್ಲಿಗೆ ಹೋಯಿತು? ಕಚೇರಿಯಿಂದಲೇ ಮಾಯವಾಯಿತಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ.
ಸಿಎಂ ಅವರು ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಸಚಿವ ಎನ್.ಎಸ್. ಬೋಸರಾಜು ಅವರ ಒತ್ತಾಸೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಮ್ಸ್ ಮಂಜೂರಿಗೆ ಪತ್ರ ಬರೆದಿದ್ದರೂ ಕ್ರಮವಾಗಿಲ್ಲ. ಇನ್ನೊಂದದೆಡೆ ಏಮ್ಸ್ ಸ್ಥಾಪನೆಗೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ಒತ್ತಡವನ್ನೂ ಹೇರುತ್ತಿಲ್ಲ. ಇದು ಕೂಡ ಹಿನ್ನಡೆಗೆ ಕಾರಣ ಎನ್ನಲಾಗಿದೆ.
ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಜಿಲ್ಲೆಯ ಸಂಸದರು ಯಾವುದೇ ಪ್ರಶ್ನೆ ಮಾಡಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗೂಡಬೇಕಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.
ಕೇಂದ್ರ ಸರಕಾರವು ಏಮ್ಸ್ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಕಾಂಗ್ರೆಸ್ ನಾಯಕ ಪಾರಸಮಲ್ ಸುಖಾಣಿ ಎಚ್ಚರಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಯಚೂರು ಇಲ್ಲವೆ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದು ಸರಿಯಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ರಾಯಚೂರು ಜಿಲ್ಲೆಯ ಹೆಸರು ಒಂದೇ ಶಿಫಾರಸು ಮಾಡಿದ್ದಾರೆ. ಆದರೆ ಸಚಿವ ಪ್ರಿಯಾಂಕ ಖರ್ಗೆ ಅವರು ಹೊಸ ರಾಗ ತೆಗೆದಿದ್ದಾರೆ ಎಂದರು.
ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರದಿಂದ ರಾಯಚೂರಿಗೆ ಮಾತ್ರ ಏಮ್ಸ್ ಶಿಫಾರಸು ಮಾಡಲಾಗಿದೆ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವ್ಯದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಲಾಗುವುದು ಎಂದು ಯಾವ ಆಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ. ವೈದ್ಯಕೀಯ ಇಲಾಖೆಯ ಸಚಿವ ನಾನೇ ಇದ್ದೇನೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇವೆ. ಅನುಮಾನ ಬೇಡ ಎಂದು ಈಚೆಗೆ ರಾಯಚೂರಿಗೆ ಭೇಟಿ ನೀಡಿದಾಗ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.












Click it and Unblock the Notifications