ಮಹಾಘಟಬಂಧನ್ ಸೀಟು ಹಂಚಿಕೆ ಫೈನಲ್ ಘೋಷಣೆ ಬಾಕಿ
ಪಾಟ್ನಾ, ಅ. 2: ಕೊರೊನಾವೈರಸ್ ಸೋಂಕು ಹರಡುವ ಭೀತಿ ನಡುವೆ ಕೇಂದ್ರ ಚುನಾವಣಾ ಆಯೋಗವು ನಿಗದಿಯಂತೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಮುಂದಾಗಿದೆ. 243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್ 10 ರಂದು ಮತ ಎಣಿಕೆಯಾಗಲಿದೆ.
ಈ ನಡುವೆ ಮಹಾಘಟಬಂಧನ್ ಸೀಟು ಹಂಚಿಕೆ ಬಗ್ಗೆ ಚರ್ಚೆ ಆರಂಭಿಸುತ್ತಿದ್ದಂತೆ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದ್ದು, ಅಕ್ಟೋಬರ್ 03ರಂದು ಈ ಬಗ್ಗೆ ಘೋಷಿಸುವ ಸಾಧ್ಯತೆಯಿದೆ.
ಸಿಪಿಐ, ಸಿಪಿಐ(ಮಾರ್ಕ್ಸ್ ವಾದಿ) ಪಕ್ಷಗಳು ಮಹಾಘಟಬಂಧನ್ ಜೊತೆ ಚುನಾವಣಾ ಪೂರ್ವ ಮೈತ್ರಿಗೆ ಒಪ್ಪಿಗೆ ಸೂಚಿಸಿವೆ. ಬಿಜೆಪಿ ನೇತೃತ್ವದ ಎನ್ಡಿಎ ಸೋಲು ಕಾಣುವುದು ನಮ್ಮ ಉದ್ದೇಶ ಎಂದು ಎಡಪಕ್ಷಗಳು ಹೇಳಿವೆ.
ನಿತೀಶ್ ನಾಗಾಲೋಟಕ್ಕೆ ಕಡಿವಾಣ ಹಾಕಲು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಮಗ ತೇಜಸ್ವಿ ಯಾದವ್ ತುದಿಗಾಲಲ್ಲಿ ನಿಂತಿದ್ದಾರೆ. ಆರ್ ಜೆಡಿ ಜೊತೆಗೆ ಕಾಂಗ್ರೆಸ್, ಆರ್ ಎಲ್ ಎಸ್ಪಿ, ವಿಐಪಿ, ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್) ಸೇರಿವೆ.

ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನ
ಬಿಹಾರ ವಿಧಾನಸಭೆಯಲ್ಲಿ 243 ಸ್ಥಾನಗಳಿದ್ದು, ಆರ್ ಜೆ ಡಿ 81 ಹಾಗೂ ಕಾಂಗ್ರೆಸ್ 27 ಸ್ಥಾನ ಹೊಂದಿವೆ. ಈಗ 163 + 80 ಸೂತ್ರದಡಿಯಲ್ಲಿ ಸೀಟು ಹಂಚಿಕೆ ಸರಿ ಹೊಂದಿಸಲು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ(ವಿಐಪಿ) ಜೊತೆಗೆ ಸಿಪಿಐ -ಎಂಎಲ್ ಜೊತೆಗೆ ಆರ್ ಜೆಡಿ ಮಾತುಕತೆ ನಡೆಸಿದೆ. ಜೊತೆಗೆ ಬಹುಜನ ಸಮಾಜವಾದಿ ಪಾರ್ಟಿ ಕೂಡಾ ಕೈಜೋಡಿಸಲಿದೆ. ಇನ್ನೊಂದೆಡೆ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಹಿಂದೂಸ್ತಾನಿ ಆವಾಯಂ ಪಾರ್ಟಿ(ಸೆಕ್ಯುಲರ್) ಜೊತೆಗೆ ಸಿಪಿಐ ಜೊತೆ ಕಾಂಗ್ರೆಸ್ ಮಾತುಕತೆ ನಡೆಸಿ 80 ಸ್ಥಾನ ಸರಿ ಹೊಂದಿಸಲಿದೆ.

163 + 80 ಆರ್ ಜೆ ಡಿ-ಕಾಂಗ್ರೆಸ್ ಹೊಸ ಸೂತ್ರ
ಎಡಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡು ಮಹಾ ಘಟಬಂಧನ್ ಇನ್ನಷ್ಟು ವಿಸ್ತಾರಗೊಂಡಿದೆ. ಸೀಟುಗಳ ಹಂಚಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ. 163 + 80 ಆರ್ ಜೆ ಡಿ-ಕಾಂಗ್ರೆಸ್ ಹೊಸ ಸೂತ್ರದಡಿಯಲ್ಲಿ ಚುನಾವಣೆ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ ಎಂದು ಆರ್ ಜೆ ಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ. ಹೆಚ್ಚು ಸಣ್ಣ ಪುಟ್ಟ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವುದು ಎರಡು ದೊಡ್ಡ ಪಕ್ಷಗಳ ಜವಾಬ್ದಾರಿಯಾಗಿದೆ.

ರಾಷ್ಟ್ರೀಯ ಜನತಾ ದಳಕ್ಕೆ ಬಂಪರ್
ರಾಷ್ಟ್ರೀಯ ಜನತಾ ದಳಕ್ಕೆ ಸುಮಾರು 145 ಕ್ಷೇತ್ರಗಳು ಲಭಿಸಲಿದ್ದು, ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಜೊತೆಗೆ ಕಣಕ್ಕಿಳಿಯಲಿದೆ. ಕಾಂಗ್ರೆಸ್ ಪಕ್ಷ 70 ಕ್ಷೇತ್ರಕ್ಕೆ ಸೀಮಿತವಾಗಲಿದೆ. ಸಿಪಿಐ, ಸಿಪಿಐ(ಎಂ) ಹಾಗೂ ಸಿಪಿಐ(ಎಂಎಲ್) ಗಳಿಗೆ 30 ಕ್ಷೇತ್ರಗಳು ಲಭಿಸಿವೆ. ಇನ್ನು ಬಾಲ್ಮಿಕಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಕಾಂಗ್ರೆಸ್ ಹಾಗೂ ಆರ್ ಜೆ ಡಿ ನಿರ್ಧರಿಸಲಿವೆ.

ಎನ್ಡಿಎ ಸೀಟು ಹಂಚಿಕೆ
ಎನ್ಡಿಎ ಸೀಟು ಹಂಚಿಕೆ ಕುರಿತಂತೆ ಹಿರಿಯ ನಾಯಕರು ಪಾಟ್ನಾದಲ್ಲಿ ಗುರುವಾರದಂದು ಸಭೆ ನಡೆಸಿದ್ದಾರೆ. ಬಹುತೇಕ ಅಕ್ಟೋಬರ್ 4ರಂದು ದೆಹಲಿಯಲ್ಲಿ ಸೀಟು ಹಂಚಿಕೆ ಕುರಿತಂತೆ ಪ್ರಕಟಣೆ ಹೊರಡಿಸಬಹುದಾಗಿದೆ. 71 ಸೀಟುಗಳ ಮೊದಲ ಹಂತದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. 2010ರ ವಿಧಾನಸಭೆಯಲ್ಲಿ ಇದ್ದ ಸೀಟು ಹಂಚಿಕೆ ಅನುಪಾತದಂತೆ ಈ ಬಾರಿಯೂ ಸೀಟು ಹಂಚಿಕೆಯಾಗಲಿ ಎಂದು ಜೆಡಿಯು ಹಠ ಹಿಡಿದಿದೆ. ಈಗ ಬಿಜೆಪಿ ವರಿಷ್ಠರು ಸೀಟು ಹಂಚಿಕೆ, ಜಾತಿ ಸೆಂಟಿಮೆಂಟು, ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತರು ಎಲ್ಲರ ಪ್ರಾತಿನಿಧ್ಯ ಪರಿಗಣಿಸಿ ಜೆಡಿಯು ಹಾಗೂ ಎಲ್ ಜೆಪಿ ನಡುವಿನ ಕಿತ್ತಾಟವನ್ನು ಮುಂದಿಟ್ಟುಕೊಂಡು ಸೀಟು ಹಂಚಿಕೆ ಸಾಹಸಕ್ಕೆ ಬಿಜೆಪಿ ಇಳಿದಿದೆ. ಜೆಡಿಯು ವಿರುದ್ಧ 143 ಎಲ್ ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧ ಚಿರಾಗ್ ಘೋಷಿಸಿದ್ದಾರೆ.












Click it and Unblock the Notifications