ಬಿಹಾರ ಪ್ರಜೆಗಳ ಮತದಲ್ಲಿ ಬದಲಾವಣೆಯ ಶಕ್ತಿ: ತೇಜಸ್ವಿ ಯಾದವ್
ಪಾಟ್ನಾ, ನವೆಂಬರ್.03: ಬಿಹಾರದಲ್ಲಿ ನಡೆಯುತ್ತಿರುವ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜೆಗಳು ಭಾಗವಹಿಸುವ ಬಗ್ಗೆ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಟ್ನಾದ 160ನೇ ಮತಗಟ್ಟೆಗೆ ತೆರಳಿದ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ತೇಜಸ್ವಿ ಯಾದವ್ ಅವರ ತಾಯಿ ರಾಬ್ರಿ ದೇವಿ ಸಹ ಜೊತೆಗಿದ್ದರು.
ಬಿಹಾರದಲ್ಲಿ ಬದಲಾವಣೆ ಬಯಸುತ್ತಿರುವ ಮತದಾರರು ಈ ನಿಟ್ಟಿನಲ್ಲಿ ತಮ್ಮ ಮತದಾನದ ಮೂಲಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಹೇಳಿದರು.

ಎರಡನೇ ಹಂತದಲ್ಲಿ 94 ಕ್ಷೇತ್ರಗಳಿಗೆ ಮತದಾನ:
ಎರಡನೇ ಹಂತದಲ್ಲಿ 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 2.85 ಕೋಟಿ ಜನ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬಿಹಾರ ಎರಡನೇ ಹಂತದ ಚುನಾವಣೆಯ ಕಣದಲ್ಲಿ 1463 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1316 ಪುರುಷ ಅಭ್ಯರ್ಥಿಗಳಾಗಿದ್ದರೆ, 146 ಮಹಿಳಾ ಅಭ್ಯರ್ಥಿಗಳಾಗಿದ್ದು, ಒಬ್ಬ ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2ನೇ ಹಂತದಲ್ಲಿ ಒಟ್ಟು 2,85,50,285 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 1,50,33,034 ಪುರುಷರು ಮತ್ತು 1,35,16,271 ಮಹಿಳಾ ಮತದಾರರು ಹಾಗೂ 980 ತೃತೀಯ ಲಿಂಗದ ಮತದಾರರು ಮತದಾನ ಮಾಡಲಿದ್ದಾರೆ. ಮೂರನೇ ಹಂತದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್.10ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ.












Click it and Unblock the Notifications