ಗೋವಾ; ಉತ್ಪಲ್ ಪರಿಕ್ಕರ್‌ಗೆ 2 ಕ್ಷೇತ್ರದ ಆಯ್ಕೆ ನೀಡಿದ ಬಿಜೆಪಿ!
ಪಣಜಿ, ಜನವರಿ 21; ಗೋವಾ ವಿಧಾನಸಭೆ ಚುನಾವಣೆಗೆ ಬಿಜೆಪಿಯ 34 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದೆ. ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ಪಣಜಿ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದೆ. ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.
ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ಕೈ ತಪ್ಪಿದ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ. "ಕೇಂದ್ರ ಬಿಜೆಪಿ ನಾಯಕರು ಉತ್ಪಲ್ ಪರಿಕ್ಕರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅವರಿಗೆ ಎರಡು ಕ್ಷೇತ್ರಗಳ ಆಯ್ಕೆ ನೀಡಲಾಗಿದೆ" ಎಂದರು.
"ಕೇಂದ್ರ ನಾಯಕರು ಉತ್ಪಲ್ ಪರಿಕ್ಕರ್ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಲು ಎರಡು ಕ್ಷೇತ್ರಗಳ ಆಯ್ಕೆ ನೀಡಲಾಗಿದೆ. ನನಗೆ ಭರವಸೆ ಇದೆ, ಈ ವಿಚಾರ ಬಗೆಹರಿಯಲಿದೆ. ಪಕ್ಷದ ಆಯ್ಕೆಯನ್ನು ಅವರು ಒಪ್ಪಿಕೊಳ್ಳಲಿದ್ದಾರೆ" ಎಂದು ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ 34 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿರುವ ಬಿಜೆಪಿ ಪಣಜಿ ಕ್ಷೇತ್ರದಲ್ಲಿ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್‌ಗೆ ಟಿಕೆಟ್ ನೀಡಿದೆ. ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದಲೇ ಟಿಕೆಟ್ ಬಯಸಿದ್ದರು. ಚುನಾವಣಾ ಪ್ರಚಾರವನ್ನು ಸಹ ಆರಂಭಿಸಿದ್ದರು.

ಅರವಿಂದ್ ಕೇಜ್ರಿವಾಲ್ ವಿರುದ್ದ ವಾಗ್ದಾಳಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉತ್ಪಲ್ ಪರಿಕ್ಕರ್ ಎಎಪಿ ಟಿಕೆಟ್‌ನಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಮೋದ್ ಸಾವಂತ್, "ಕೇಜ್ರಿವಾಲ್ ತಮ್ಮ ರಾಜಕೀಯ ಪ್ರಯೋಜನಕ್ಕಾಗಿ ಇಂದು ನೀಡಿದಂತೆ ಹೇಳಿಕೆ ನೀಡುತ್ತಿರುತ್ತಾರೆ. ಅವರು ದೆಹಲಿಯಲ್ಲಿ ಒಂದು, ಗೋವಾದಲ್ಲಿ ಮತ್ತೊಂದು ರೀತಿ ಮಾತನಾಡುತ್ತಾರೆ. ಗೋವಾದ ಜನರಿ ಇಂತಹ ನಾಯಕರನ್ನು ಗುರುತಿಸುತ್ತಾರೆ" ಎಂದು ಟೀಕಿಸಿದರು.

ಉತ್ಪಲ್ ಪರಿಕ್ಕರ್‌ಗೆ ಬೆಂಬಲ
ಉತ್ಪಲ್ ಪರಿಕ್ಕರ್‌ಗೆ ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಶಿವಸೇನೆ ಮತ್ತು ಎಎಪಿ ಅವರಿಗೆ ಬೆಂಬಲ ನೀಡಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉತ್ಪಲ್ ಪರಿಕ್ಕರ್ ಬಯಸಿದ್ದರು. ಬಿಜೆಪಿ ನೀಡುವ ಆಯ್ಕೆಯನ್ನು ಒಪ್ಪಿಕೊಳ್ಳುತ್ತಾರಾ? ಅಥವ ಪಕ್ಷೇತರ ಅಭ್ಯರ್ಥಿಯಾಗುತ್ತಾರಾ? ಎಂದು ಕಾದು ನೋಡಬೇಕಿದೆ.

ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ
"ನನಗೆ ತಿಳಿದಿದೆ ಇಲ್ಲಿಯ ಜನರು ಬಿಜೆಪಿಯನ್ನು ಪುನಃ ಸ್ಪಷ್ಟ ಬಹುಮತದಿಂದ ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರು ಗುರುತಿಸಿದ್ದಾರೆ. ನಾವು ಶಾಸಕ, ಸ್ಪೀಕರ್, ಮುಖ್ಯಮಂತ್ರಿ ಆದಾಗಿನಿಂದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೊಳಿಸಿದ್ದೇನೆ" ಎಂದು ಪ್ರಮೋದ್ ಸಾವಂತ್ ಹೇಳಿದರು.

ಯುವಕರಿಗೆ ಟಿಕೆಟ್ ನೀಡಲಾಗಿದೆ
'ಗೋವಾ ವಿಧಾನಸಭೆ ಚುನಾವಣೆಗೆ ಬಿಜೆಪಿ 50 ವರ್ಷಕ್ಕಿಂತ ಕಡಿಮೆ ವಯೋಮಾನದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಯುವಕರು ಜನರೊಂದಿಗೆ ಶಾಸಕರು ಸುಲಭವಾಗಿ ಬೆರಯುತ್ತಾರೆ, ಅವರ ಬೇಡಿಕೆಗಳನ್ನು ಈಡೇರಿಸುತ್ತಾರೆ" ಎಂದು ಪ್ರಮೋದ್ ಸಾವಂತ್ ಹೇಳಿದರು.
ಚುನಾವಣೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಾಂಕೆಲಿಮ್ ಕ್ಷೇತ್ರದಿಂದ ಮತ್ತು ಉಪ ಮುಖ್ಯಮಂತ್ರಿ ಮನೋಹರ್ ಅಜ್‌ಗಾವೋಂಕರ್ ಮರ್ಗಾನ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
Recommended Video

ಇಂದು ಚುನಾವಣೆ ಅಧಿಸೂಚನೆ ಪ್ರಕಟ
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಶುಕ್ರವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಜನವರಿ 28ರ ತನಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ನಾಮಪತ್ರ ವಾಪಸ್ ಪಡೆಯಲು 31/1/2022 ಕೊನೆಯ ದಿನವಾಗಿದೆ. ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.
ಬಿಜೆಪಿ, ಕಾಂಗ್ರೆಸ್, ಎಎಪಿ, ಎನ್‌ಸಿಪಿ, ಶಿವಸೇನೆ, ಟಿಎಂಸಿ ಮತ್ತು ಗೋವಾದ ಪ್ರಾದೇಶಿಕ ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಬಿಜೆಪಿ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೆ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಎಪಿ ವಕೀಲ ಅಮಿತ್ ಪಾಲೇಕರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.












Click it and Unblock the Notifications