ಆರ್ ಬಿಐ ವಿವಾದ: ಬಿಜೆಪಿಗೆ ವರದಾನವಾದ ಮನಮೋಹನ್ ಸಿಂಗ್ ಹೇಳಿಕೆ
ನವದೆಹಲಿ, ನವೆಂಬರ್ 07: ಹಿಂದೊಮ್ಮೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ್ದ ಹೇಳಿಕೆಯೇ ಈಗಿನ ಆರ್ ಬಿಐ ವಿವಾದದ ಸಮಯದಲ್ಲಿ ಬಿಜೆಪಿಗೆ ವರದಾನವಾಗುತ್ತದೆಯೇ?
ಮನಮೋಹನ್ ಸಿಂಗ್ ಅವರ ಪುತ್ರಿ ದಮನ್ ಸಿಂಗ್ ಅವರು ಬರೆದ 'strictly personal manmohan and gursharan' ಪುಸ್ತಕದಲ್ಲಿ ಆರ್ ಬಿಐ ಮತ್ತು ಸರ್ಕಾರದ ಸಂಬಂಧದ ಕುರಿತು ಮನಮೋಹನ್ ಸಿಂಗ್ ಮಾತನಾಡಿದ ಸಾಲುಗಳು ಉಲ್ಲೇಖವಾಗಿವೆ.
'ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಡುವೆ ಯಾವತ್ತಿಗೂ ಕೊಡು-ಕೊಳ್ಳುವ ವ್ಯವಹಾರಗಳಿರುತ್ತವೆ. ಆರ್ ಬಿಐ ಎಂದಿಗೂ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆರ್ ಬಿಐ ಗವರ್ನರ್ ಎಂದಿಗೂ ಹಣಕಾಸು ಸಚಿವರಿಗಿಂತ ದೊಡ್ಡವರಲ್ಲ. ಹಣಕಾಸು ಸಚಿವರು ಹೇಳಿದ್ದನ್ನು ಎಂದಿಗೂ ಆರ್ ಬಿಐ ಗವರ್ನರ್ ವಿರೋಧಿಸುವಂತಿಲ್ಲ. ಬದಲಾಗಿ ಕೆಲಸ ಬಿಡಬಹುದು' ಎಂದು ಮನಮೋಹನ್ ಸಿಂಗ್ ಹೇಳಿದ್ದನ್ನು ಅವರ ಪುತ್ರಿ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಸರ್ಕಾರ ಮತ್ತು ಆರ್ ಬಿಐ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಮತ್ತು ಎನ್ ಡಿಎ ಸರ್ಕಾರದ ನಡುವೆ ಮುಸುಕಿನ ಕಾಳಗ ನಡೆಯುತ್ತಿದೆ. ಈ ಸಮಯದಲ್ಲಿ ಸರ್ಕಾರ ಅನಗತ್ಯವಾಗಿ ಆರ್ ಬಿಐ ವ್ಯವಹಾರಗಳಲ್ಲಿ ತಲೆ ತೂರಿಸುತ್ತಿದೆ ಎಂದು ವಿಪಕ್ಷಗಳೂ ಮಾತನಾಡುತ್ತಿದ್ದು, ಕಾಂಗ್ರೆಸ್ ಮುಖಂಡರೇ ಆಗಿರುವ ಮನಮೋಹನ್ ಸಿಂಗ್ ಅವರು ಒಂದಾನೊಂದು ಕಾಲದಲ್ಲಿ ಆಡಿದ್ದ ಮಾತು, ಬಿಜೆಪಿಗೆ ಇದೀಗ ವರವಾಗಿ ಪರಿಣಮಿಸಿದೆ.
ಇತ್ತೀಚೆಗಷ್ಟೇ ಆರ್ ಬಿಐ ಗವರ್ನರ್ ಮತ್ತು ಸರ್ಕಾರದ ಸಂಬಂಧಗಳ ಬಗ್ಗೆ ಮಾಜಿ ಪ್ರಧಾನಿ ದಿ.ಜವರಲಾಲ್ ನೆಹರು ಅವರು ಬರೆದಿದ್ದ ಪತ್ರವೊಂದೂ ಬಿಜೆಪಿಗೆ ವರದಾನವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications