ಜೈಲುವಾಸಿಗಳಾದ ಇಂದ್ರಾಣಿ, ಪೀಟರ್ ಗೆ ವಿವಾಹ ಬಂಧನದಿಂದ ಮುಕ್ತಿ
ಮುಂಬೈ, ಅಕ್ಟೋಬರ್ 03: ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲುವಾಸಿಗಳಾಗಿರುವ ಮಾಧ್ಯಮ ದೊರೆ ಪೀಟರ್ ಮುಖರ್ಜಿಯಾ ಹಾಗೂ ಇಂದ್ರಾಣಿ ಮುಖರ್ಜಿಯಾಗೆ ವಿವಾಹ ಬಂಧನದಿಂದ ಮುಕ್ತಿ ಸಿಕ್ಕಿದೆ. ಮುಂಬೈನ ಕುಟುಂಬ ನ್ಯಾಯಾಲಯದಿಂದ ಇಂದ್ರಾಣಿ ಹಾಗೂ ಪೀಟರ್ ಗೆ ವಿಚ್ಛೇದನ ಸಿಕ್ಕಿದೆ.
ಇಂದ್ರಾಣಿ(47) ಹಾಗೂ ಪೀಟರ್ (62) ಇಬ್ಬರು 2002ರಲ್ಲಿ ಮದುವೆಯಾಗಿದ್ದರು. ಸುಮಾರು 17 ವರ್ಷಗಳ ವಿವಾಹ ಬಂಧನದಿಂದ ಮುಕ್ತಿ ಬಯಸಿ ಇಬ್ಬರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈನ ಸಬ್ ಅರ್ಬನ್ ಬಾಂದ್ರಾದ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಸಲಾಗಿತ್ತು. ಇಬ್ಬರ ಪಾಲಿನ ಆಸ್ತಿ ಹಂಚಿಕೆ, ಸ್ಪೇನ್, ಲಂಡನ್ ನಲ್ಲಿರುವ ಬಂಗೆಲೆ, ಬ್ಯಾಂಕ್ ಖಾತೆ, ವಿವಿಧ ಕ್ಷೇತ್ರಗಳಲ್ಲಿನ ಹೂಡಿಕೆ ಎಲ್ಲವನ್ನು ಹಂಚುವ ಕಾರ್ಯಕ್ಕೂ ಚಾಲನೆ ಸಿಕ್ಕಿತ್ತು.
2014ರಲ್ಲಿ ಮೀಡಿಯಾ ಕುಳ ಪೀಟರ್ ಮುಖರ್ಜಿಯಾ ಅವರು ತನ್ನ ಹೆಂಡತಿ ಇಂದ್ರಾಣಿಯನ್ನು ಮುಂದಿಟ್ಟುಕೊಂಡು ಐಎನ್ಎಕ್ಸ್ ಬ್ಯಾನರ್ ಅಡಿಯಲ್ಲಿ ಹಲವಾರು ಕಂಪನಿಗಳನ್ನು ಆರಂಭಿಸಿದ್ದರು. ಐಎನ್ಎಕ್ಸ್ ನ್ಯೂಸ್ ಪ್ರೈ.ಲಿ., ಐಎನ್ಎಕ್ಸ್ ಮೀಡಿಯಾ ಪ್ರೈ.ಲಿ., ಐಪಿಎಂ ಇನ್ಕಾನ್ ಪ್ರೈ.ಲಿ., ಐಎನ್ಎಕ್ಸ್ ಎಕ್ಸಿಕ್ಯೂಟಿವ್ ಸರ್ಚ್ ಪ್ರೈ.ಲಿ. ಮುಂತಾದ ಕಂಪನಿಗಳನ್ನು ಆರಂಭಿಸಿದ್ದರು. 2012ರ ಏಪ್ರಿಲ್ 24ರಂದು ತನ್ನ ಮಗಳು ಶೀನಾ ಬೋರಾ ಅವರನ್ನು ಷಡ್ಯಂತ್ರ ರಚಿಸಿ ಹತ್ಯೆಗೈಯುವ ಮುನ್ನ ಪೀಟರ್ ಮತ್ತು ಇಂದ್ರಾಣಿ ಅವರು ಐಎನ್ಎಕ್ಸ್ ಗ್ರೂಪ್ ಆಫ್ ಕಂಪನಿಗಳಲ್ಲಿ ಹೂಡಿಕೆದಾರರಾಗಿದ್ದರು. ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಜೈಲು ಸೇರಿದ್ದಾರೆ.

2015ರಲ್ಲಿ ಬಂಧನಕ್ಕೊಳಗಾದ ಇಂದ್ರಾಣಿ ಸದ್ಯ ಬೈಕುಲಾ ಮಹಿಳೆಯರ ಜೈಲಿನಲ್ಲಿದ್ದರೆ, ಪೀಟರ್ ಅವರು ಸೆಂಟ್ರಲ್ ಮುಂಬೈನ ಆರ್ಥರ್ ರೋಡ್ ರಸ್ತೆಯ ಜೈಲಿನಲ್ಲಿದ್ದಾರೆ. 24 ವರ್ಷ ವಯಸ್ಸಿನ ಶೀನಾ ಬೋರಾ(ಇಂದ್ರಾಣಿಗೆ ಈ ಮುಂಚಿನ ಪತಿಯಿಂದ ಹುಟ್ಟಿದ ಮಗಳು)ಳನ್ನು 2012ರ ಏಪ್ರಿಲ್ ನಲ್ಲಿ ಅಪಹರಿಸಿ ಹತ್ಯೆಗೈಯಲಾಗಿತ್ತು. ಇಂದ್ರಾಣಿಯ ಮಾಜಿ ಪತಿ ಸಂಜೀವ್ ಖನ್ನಾ, ಕಾರು ಚಾಲಕ ಶ್ಯಾಮ್ ವರ್ ರೈ ಜೊತೆ ಪೀಟರ್ ಮುಖರ್ಜಿ ಈ ಕೊಲೆ ಸಂಚು ರೂಪಿಸಿದ್ದು ಬಯಲಾಗಿತ್ತು.












Click it and Unblock the Notifications