ರಾಮ್ ರಹೀಮ್ ಜತೆಗಿನ ಸಂಬಂಧ ಬಗ್ಗೆ ಹನಿಪ್ರೀತ್
ನವದೆಹಲಿ, ಅಕ್ಟೋಬರ್ 03: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಅವರ ದತ್ತುಪುತ್ರಿ ಹನಿಪ್ರೀತ್ ಅವರು ಸುದ್ದಿವಾಹಿನಿವೊಂದಕ್ಕೆ ಸಂದರ್ಶನ ನೀಡಿದ್ದಾರೆ. ರಾಮ್ ರಹೀಮ್ ಜತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಡೇರಾ ಸಚ್ಚ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಹನಿಪ್ರೀತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಮ್ ರಹೀಂ ಮುಗ್ಧರಾಗಿದ್ದು, ಶುದ್ಧ ವ್ಯಕ್ತಿತ್ವದವರಾಗಿದ್ದಾರೆ. ಅವರು ಕೋರ್ಟ್, ಜೈಲಿಗೆ ಹೋದ ಸಂದರ್ಭದಲ್ಲಿ ಮಗಳಾಗಿ ನಾನು ನನ್ನ ಕೆಲಸ ಮಾಡಿದ್ದೇನೆ. ಅವರ ಹಾಗೂ ನನ್ನ ನಡುವಿನ ಸಂಬಂಧ ಪರಿಶುದ್ಧವಾದ ತಂದೆ, ಮಗಳ ಸಂಬಂಧವಾಗಿದೆ.ಮಾಧ್ಯಮಗಳಲ್ಲಿ ನನ್ನ ಹಾಗೂ ಬಾಬಾ ಸಂಬಂಧದ ಬಗ್ಗೆ ಬಂದ ವರದಿಗಳಿಂದ ಘಾಸಿಯಾಗಿದೆ ಎಂದು ಹನಿಪ್ರೀತ್ ಹೇಳಿದ್ದಾರೆ.
ಬಂಧನ ಭೀತಿಯಲ್ಲಿರುವ ಹನಿಪ್ರೀತ್ ಇನ್ಸಾನ್ ಅವರು ಹರಿಯಾಣ ಪೊಲೀಸರ ಕಣ್ಣಿಗೆ ಬೀಳದೆ ಸುದ್ದಿ ವಾಹಿನಿ ಜತೆ ಮಾತನಾಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಇದ್ದು, ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟಿನಲ್ಲಿ ಕಾನೂನು ಸಮರ ಮುಂದುವರೆಸುತ್ತೇನೆ ಎಂದಿದ್ದಾರೆ.
ನನ್ನ ಮಾಜಿ ಪತಿ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ನನಗೆ ಜೀವ ಭಯವಿದೆ. ನಾನು ನಿರ್ದೇಶಕಿಯಾಗುವ ಕನಸು ಕಂಡಿದ್ದೆ. ನನ್ನನ್ನು ದೇಶದ್ರೋಹಿ ಎನ್ನುವಂತೆ ಬಿಂಬಿಸಲಾಗಿದೆ. ಇದರಿಂದ ನೊಂದಿದ್ದೇನೆ.ನನ್ನ ತಂದೆ ಜೈಲಿಗೆ ಹೋದ ನಂತರ ಅಸಹಾಯಕಳಾಗಿದ್ದೇನೆ. ನಾನು ಕೋರ್ಟ್ ಗೆ ಹೋಗುತ್ತೇನೆ. ನನಗೆ ನ್ಯಾಯ ಸಿಗುತ್ತದೆ ಎಂದು ಹನಿಪ್ರೀತ್ ತಮ್ಮ ಗೋಳು ತೋಡಿಕೊಂಡಿದ್ದಾರೆ.
ಸೆಪ್ಟೆಂಬರ್ 27ರಂದು ಹನಿಪ್ರೀತ್ ಪರ ವಕೀಲರು ದೆಹಲಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಹಾಕಿದ್ದು ತಿರಸ್ಕೃತಗೊಂಡಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಗಲಭೆ, ಘರ್ಷಣೆಗೆ ಕಾರಣರಾದರು ಎಂಬ ಆರೋಪವನ್ನು ಹನಿಪ್ರೀತ್ ಮೇಲೆ ಹಾಕಲಾಗಿದ್ದು, ಲುಕ್ ಔಟ್ ನೋಟಿಸ್ ಕೂಡಾ ಜಾರಿಯಲ್ಲಿದೆ.












Click it and Unblock the Notifications