ಸೈಕಲ್ ದಿನ: ಫಿಟ್ ಇಂಡಿಯಾ ರ‍್ಯಾಲಿಗೆ ಚಾಲನೆ
ನವದೆಹಲಿ, ಜೂ. 3: ದೆಹಲಿಯಲ್ಲಿ ವಿಶ್ವ ಬೈಸಿಕಲ್ ದಿನ 2022 ರ ಅಂಗವಾಗಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ದೇಶಾದ್ಯಂತ ಸೈಕಲ್ ರ‍್ಯಾಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಸಚಿವ ಠಾಕೂರ್ ಜೊತೆ 750 ಯುವಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಭಾಗವಾಗಿ 1. 29 ಲಕ್ಷ ಯುವಕರು ಸೈಕ್ಲಿಂಗ್ ಮಾಡುವ ಮೂಲಕ ಒಂದು ದಿನದಲ್ಲಿ 9.68 ಲಕ್ಷ ಕಿ.ಮೀ ಕ್ರಮಿಸುವ ಗುರಿಯನ್ನು ಹೊಂದಲಾಗಿದೆ. ಕಾರ್ಯಕ್ರಮದ ಉದ್ದೇಶ ಜನರಲ್ಲಿ ಸೈಕ್ಲಿಂಗ್ ಬಗ್ಗೆ ಜಾಗೃತಿ ಮೂಡಿಸುವುದು, ಇದರಿಂದಾಗಿ ಜನರು ಸದೃಢವಾಗಿ ತಮ್ಮ ದೈನಂದಿನ ದಿನಚರಿಯಲ್ಲಿ ಸೈಕಲ್ ಅನ್ನು ಬಳಸುವ ಅಭ್ಯಾಸವನ್ನು ಉತ್ತೇಜಿಸುವುದಾಗಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ, ಸಂಸ್ಕೃತಿ ಮತ್ತು ಬಾಹ್ಯ ವ್ಯವಹಾರಗಳ ಸಚಿವ ಮೀನಾಕ್ಷಿ ಲೇಖಿ ಮತ್ತು ಸಂಸದರಾದ ಮನೋಜ್ ತಿವಾರಿ, ಹರ್ಷವರ್ಧನ್ ಮತ್ತು ರಮೇಶ್ ಬಿಧುರಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವ ಬೈಸಿಕಲ್ ದಿನದಂದು ನಡೆಯುತ್ತಿರುವ ಈ ಉಪಕ್ರಮದ ಮೂಲಕ ಒಂದೇ ದಿನದಲ್ಲಿ 1.29 ಲಕ್ಷ ಯುವ ಸೈಕ್ಲಿಸ್ಟ್‌ಗಳು ಒಟ್ಟು 9.68 ಲಕ್ಷಕ್ಕೂ ಹೆಚ್ಚು ಕಿಲೋಮೀಟರ್‌ಗಳನ್ನು ಕ್ರಮಿಸಲಿದ್ದಾರೆ. ದೇಶದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿ ಮತ್ತು ದೇಶಾದ್ಯಂತ 75 ಐಕಾನಿಕ್ ಸ್ಥಳಗಳಲ್ಲಿ ಸೈಕಲ್ ರ‍್ಯಾಲಿಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಜೂನ್ 3 ಅನ್ನು ವಿಶ್ವ ಬೈಸಿಕಲ್ ದಿನವನ್ನಾಗಿ ಆಚರಿಸಲು ಘೋಷಿಸಿದೆ. ಇದನ್ನು ಜೂನ್ 3, 2018 ರಂದು ಮೊದಲ ಬಾರಿಗೆ ಆಚರಿಸಲಾಗಿದೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 'ಭಾರತ@75', ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ವಿಶ್ವ ಬೈಸಿಕಲ್ ದಿನವನ್ನು ಆಚರಿಸುತ್ತಿದೆ. ಸಚಿವಾಲಯವು ಎರಡು ಪ್ರಮುಖ ಯುವ ಸಂಘಟನೆಗಳಾದ ನೆಹರು ಯುವ ಕೇಂದ್ರ ಸಂಘಟನೆ (NYKS) ಮತ್ತು ರಾಷ್ಟ್ರೀಯ ಸೇವಾ ಯೋಜನೆ (NSS) ಸಹಯೋಗದೊಂದಿಗೆ ಏಕಕಾಲದಲ್ಲಿ ನಾಲ್ಕು ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಇವುಗಳಲ್ಲಿ ದೆಹಲಿಯಲ್ಲಿ ವಿಶ್ವ ಬೈಸಿಕಲ್ ದಿನದ ಪ್ರಾರಂಭ, 35 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳಲ್ಲಿ ಸೈಕಲ್ ರ‍್ಯಾಲಿಗಳು, ದೇಶದ 75 ಪ್ರಸಿದ್ಧ ಹೆಗ್ಗುರುತುಗಳು ಮತ್ತು ಎಲ್ಲಾ ಬ್ಲಾಕ್‌ಗಳು ಸೇರಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಬೈಸಿಕಲ್ ದಿನದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಯೊಬ್ಬರಿಗೂ ಸಂದೇಶವಿದೆ. ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಸ್ವಚ್ಛ ಇಂಡಿಯಾ, ಆರೋಗ್ಯ ಇಂಡಿಯಾ ಈ ಎಲ್ಲ ಕಾರ್ಯಕ್ರಮಗಳನ್ನು ಇಲ್ಲಿ ಒಳಗೊಂಡಿದೆ. ಅಲ್ಲದೆ ಇದು ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ವಿಶ್ವ ಸೈಕಲ್ ದಿನದ ಅಂಗವಾಗಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಸೈಕ್ಲಿಸ್ಟ್‌ಗಳು ಕಾರ್ಯಕ್ರಮದ ಭಾಗವಾಗಿ ಪಾಲ್ಗೊಳ್ಳಲಿದ್ದಾರೆ. ಸೈಕಲ್ ಬಳಸುವ ಮೂಲಕ ವಾಯು ಮಾಲಿನ್ಯ ತಡೆಗಟ್ಟಬಹುದು. ಅಲ್ಲದೆ ಇದು ಸ್ವಚ್ಛ ಭಾರತ ಅಭಿಯಾನವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.












Click it and Unblock the Notifications