1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು
ನವದೆಹಲಿ, ಡಿಸೆಂಬರ್ 17 : ಯಾರ ಅಂಕೆಗೂ ಸಿಗದಿದ್ದ ಜನರ ಗುಂಪು ನಿರ್ಮಲ್ ಸಿಂಗ್ ಮೇಲೆ ಸೀಮೆಎಣ್ಣೆ ಸುರಿದಿತ್ತು. ಸೀಮೆಎಣ್ಣೆ ಸುರಿದರೆ ಸಾಕೆ? ಕಡ್ಡಿಗೀರಲು ಬೆಂಕಿಪೊಟ್ಟಣ ಬೇಕಲ್ಲ? ಬೆಂಕಿಪೊಟ್ಟಣ ಅಲ್ಲೆಲ್ಲೂ ಸಿಗದಿದ್ದಾಗ, ಸಂಕಷ್ಟಕ್ಕೊಳಗಾಗಿದ್ದ ನಿರ್ಮಲ್ ನನ್ನು ರಕ್ಷಿಸಬೇಕಿದ್ದ ಪೊಲೀಸನೇ ಬೆಂಕಿಪೊಟ್ಟಣ ನೀಡಿದ್ದ! ಮುಂದೆ?
ಮುಂದೇನಾಯಿತೆಂದು ಗದ್ಗದಿತರಾಗಿ ನಿರ್ಪ್ರೀತ್ ಕೌರ್ ಅವರು ಕಣ್ಣಲ್ಲಿ ಗಂಗೆಯನ್ನು ಸುರಿಸುತ್ತಲೇ ಹೇಳುತ್ತಾರೆ. ಆ ನೀರಲ್ಲಿ ಬೆಂಕಿಯಿದೆ, ಬಿರುಗಾಳಿಯಿದೆ, ಹತಾಶೆಯಿದೆ, ಮೌನವಿದೆ, ಆಕ್ರೋಶವಿದೆ. ಕಡೆಗೂ ಆ ಕಣ್ಣೀರಿಗೆ ಸಾರ್ಥಕತೆ ದೊರೆತಿದೆ.
"34 ವರ್ಷಗಳ ಸುದೀರ್ಘ ಪ್ರಯತ್ನದ ನಂತರ ನನಗೆ ನ್ಯಾಯ ದೊರೆತಿದೆ. ಅವರು (ಸಜ್ಜನ್ ಕುಮಾರ್) ಜೈಲಿಗೆ ಹೋಗಲೇಬೇಕು" ಎಂದು ಐವತ್ತು ವರ್ಷಗಳ ನಿರ್ಪ್ರೀತ್ ಕೌರ್ ನಿಟ್ಟುಸಿರುಬಿಡುತ್ತಾರೆ. ಆಗ ನಿರ್ಪ್ರೀತ್ ಕೌರ್ ವಯಸ್ಸು ಕೇವಲ 16. ತೀರ್ಪು ಹೊರಬಂದ ನಂತರ ನಿರ್ಪ್ರೀತ್ ಅವರಂತೆ ನಿಟ್ಟುಸಿರು ಬಿಟ್ಟವರೆಷ್ಟೋ? ಆಕ್ರೋಶದಲ್ಲಿ ನಟಿಕೆ ಮುರಿದವರೆಷ್ಟೋ?
207 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ಪೂನಂ ಎಂಬ ಬಂಬಾ ಅವರು 1984ರ ನವೆಂಬರ್ 1ರಿಂದ ನಡೆದ ಸಿಖ್ ವಿರೋಧಿ ದಂಗೆ ಮತ್ತು ಹತ್ಯಾಕಾಂಡ ಸಂಪೂರ್ಣ ವಿವರಗಳನ್ನು ಬರೆದಿದ್ದಾರೆ. ಇಂದಿರಾ ಗಾಂಧಿಯ ಹತ್ಯೆಯ (1984 ಅಕ್ಟೋಬರ್ 31) ಮರುದಿನವೇ ನಡೆದ ಅಮಾನುಷ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿಯೇ ಒಂದು ಕಪ್ಪುಚುಕ್ಕೆ.
34 ವರ್ಷಗಳ ನಂತರ "ನನ್ನ ತಾಯಿಯ (ಇಂದಿರಾ ಗಾಂಧಿ) ಹತ್ಯೆ ಮಾಡಲಾಗಿದೆ. ಸರ್ದಾರ್ ಗಳನ್ನು ಕೊಲ್ಲಿರಿ" ಎಂದು ಸಿಖ್ ಹತ್ಯಾಕಾಂಡಕ್ಕೆ ಪ್ರೇರೇಪಣೆ ನೀಡಿದ್ದ 73 ವರ್ಷದ ಹಿರಿಯ ರಾಜಕಾರಣಿ, ಕಾಂಗ್ರೆಸ್ ಧುರೀಣ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪನ್ನು ಪಟಿಯಾಲಾ ಕೋರ್ಟ್ ಸೋಮವಾರ ನೀಡಿದೆ. ಅಂದು ಆಗಿದ್ದೇನು ಮುಂದೆ ಓದಿರಿ.

ಬೆಂಕಿ ಕಡ್ಡಿ ಗೀರಿಯೇ ಬಿಟ್ಟ ದುರುಳ
ನಿರ್ಮಲ್ ಸಿಂಗ್ ಸೀಮೆಎಣ್ಣೆಯಿಂದ ತೊಯ್ದು ತೊಪ್ಪೆಯಾಗಿದ್ದರು. ಅಟ್ಟಹಾಸದಿಂದ ಕೂಗುತ್ತಿದ್ದ ಸಿಖ್ ವಿರೋಧಿ ಪೊಲೀಸ ಬೆಂಕಿಪೊಟ್ಟಣ ನೀಡುತ್ತಲೇ ಉದ್ರಿಕ್ತ ಜನಸ್ತೋಮದಲ್ಲಿದ್ದ ವ್ಯಕ್ತಿಯೊಬ್ಬ ಕಡ್ಡಿ ಗೀರಿಯೇಬಿಟ್ಟಿದ್ದ. ಧಗಧಗನೆ ಉರಿಯಲು ಆರಂಭಿಸಿದ ನಿರ್ಮಲ್ ಸಿಂಗ್ ಪ್ರಾಣ ಉಳಿಸಿಕೊಳ್ಳಲು ಕ್ಷಣವೂ ತಡಮಾಡದೆ ಚರಂಡಿಗೆ ಜಿಗಿದಿದ್ದಾನೆ. ಹತ್ಯೆಗೈಯಲು ಬಂದಿದ್ದ ಕಟುಕರು ನಿರ್ಮಲ್ ಸಿಂಗ್ ನನ್ನು ಚರಂಡಿಯಿಂದ ಎಳೆದಿದ್ದಾರೆ. ಆತ ಬದುಕಿರುವುದನ್ನು ಅರಿತ ರಾಕ್ಷಸರು ಆತನನ್ನು ಕಂಬಕ್ಕೆ ಕಟ್ಟಿ, ಮತ್ತೆ ಸೀಮೆಎಣ್ಣೆ ಸುರಿದು, ಕಡ್ಡಿ ಗೀರಿದ್ದಾರೆ.

ಅರ್ಚಕರಿಂದಲೂ ಹತ್ಯೆಗೆ ಸಹಾಯ
ಧಗಧಗಿಸುವ ಬೆಂಕಿಯ ಜೊತೆ ಕಟ್ಟಿದ ಹಗ್ಗವೂ ಸುಟ್ಟು, ತನ್ನ ಪ್ರಾಣಕ್ಕಾಗಿ ಮತ್ತೆ ಹೋರಾಟ ಮುಂದುವರಿಸಿದ ನಿರ್ಮಲ್ ಸಿಂಗ್ ಮತ್ತೆ ಚರಂಡಿಗೆ ಜಿಗಿದಿದ್ದಾರೆ. ಬಿಡದ ಜನಜಂಗುಳಿ ಕಬ್ಬಿಣದ ರಾಡ್ ತೆಗೆದುಕೊಂಡು ನಿರ್ಮಲ್ ಸಿಂಗ್ ನನ್ನು ಬಡಿದಿದ್ದಾರೆ. ಸಾಲದೆಂಬಂತೆ, ವಸ್ತುವನ್ನು ಕ್ಷಣಾರ್ಧದಲ್ಲಿ ಸುಟ್ಟು ಬೂದಿ ಮಾಡುವ ರಂಜಕವನ್ನು ನಿರ್ಮಲ್ ಸಿಂಗ್ ಮೇಲೆ ಎಸೆದಿದ್ದಾರೆ. ದುರುಳರಿಗೆ ಅಂಗಡಿ ಮಾಲಿಕರು, ಸ್ಥಳೀಯ ದೇವಸ್ಥಾನದ ಅರ್ಚಕರು ಕೂಡ ಈ ಹತ್ಯೆಗೆ ಸಹಾಯ ಮಾಡಿದ್ದರು ಎಂದು ನಿರ್ಪ್ರೀತ್ ಕೌರ್ ಅವರು ದೂರು ನೀಡಿದ್ದರು. ಈ ದುರ್ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅವರು ಅಂದು ಮಾತ್ರವಲ್ಲ, ನಂತರವೂ ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಇವನು ವಿಷದ ಹಾವಿನ ಮಗ, ಇವನನ್ನೂ ಕೊಲ್ಲಿರಿ
ತಮ್ಮ ತಂದೆ ಸತ್ತ ಮರುದಿನವೇ ಸಜ್ಜನ್ ಕುಮಾರ್, ಜನರನ್ನು ಉದ್ದೇಶಿಸಿ ಮಾತನಾಡುತ್ತ, ಸಿಖ್ಖರನ್ನು ರಕ್ಷಿಸುತ್ತಿರುವ ಯಾವುದೇ ಹಿಂದೂವನ್ನೂ ಬಿಡಬಾರದು. ಇಂದಿರಾ ಗಾಂಧಿಯನ್ನು ಹತ್ಯೆಯನ್ನು ಸಂಭ್ರಮಿಸುವ ಒಬ್ಬೇ ಒಬ್ಬ ಸರ್ದಾರ್ಜಿಯೂ ಉಳಿಯಬಾರದು ಎಂದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಸಜ್ಜನ್ ಅವರ ಸಹೋದರ ಸಂಬಂಧಿ ನಿರ್ಪ್ರೀತ್ ಅವರ 9 ವರ್ಷ ತಮ್ಮನನ್ನು, 'ಇವನು ವಿಷದ ಹಾವಿನ ಮಗ, ಇವನನ್ನೂ ಕೊಲ್ಲಿರಿ' ಎಂದು ಅಬ್ಬರಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು. ದೂರು ನೀಡಿದ ನಂತರ ನನ್ನ ಬದುಕು ಬದುಕಾಗಿರಲಿಲ್ಲ. ಮುಂದಿನದೆಲ್ಲ ಬರೀ ನರಕಯಾತನೆ ಎಂದು ನಿರ್ಪ್ರೀತ್ ಕೌರ್ ಅವರು ಅಲವತ್ತುಕೊಂಡಿದ್ದಾರೆ.

ಸುಳ್ಳು ಕೇಸನ್ನು ದಾಖಲಿಸಿ ಜೈಲಿಗೆ
ಸಜ್ಜನ್ ಕುಮಾರ್ ವಿರುದ್ಧ ದೂರು ನೀಡಿದ ನಿರ್ಪ್ರೀತ್ ಕೌರ್ ವಿರುದ್ಧ ಇಂದು ಅಸ್ತಿತ್ವದಲ್ಲಿರದ ಟಾಡಾ ಕಾಯ್ದೆಯಡಿ ಕೇಸನ್ನು ದಾಖಲಿಸಲಾಯಿತು. ಅವರಿಗೆ ಸಿಖ್ ಭಯೋತ್ಪಾದಕರೊಂದಿಗೆ ಸಂಪರ್ಕವಿದೆ ಎಂದು ಸುಳ್ಳು ದೂರನ್ನು ದಾಖಲಿಸಲಾಯಿತು. ಸುಳ್ಳು ಕೇಸನ್ನು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಲಾಯಿತು. ನಿರ್ಪ್ರೀತ್ ಮಾತ್ರವಲ್ಲ ಅವರ ತಾಯಿಯ ವಿರುದ್ಧವೂ ಸುಳ್ಳು ಕೇಸನ್ನು ದಾಖಲಿಸಿ ಮೂರು ವರ್ಷ ಜೈಲಿಗೆ ಕಳುಹಿಸಲಾಯಿತು. ಆದರೆ, ನಂತರ ಅವರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಕೈಬಿಡಲಾಯಿತು.

ಮನೆಮಂದಿಯನ್ನು ಕಳೆದುಕೊಂಡವರೆಷ್ಟೋ
ನಿರ್ಪ್ರೀತ್ ಕೌರ್ ತಂದೆ ಹತ್ಯೆಯಾದ ದಿನವೇ ಜಗ್ದೀಶ್ ಕೌರ್ ಅವರು ಕೂಡ ಈ ಹತ್ಯಾಕಾಂಡದಲ್ಲಿ ತಮ್ಮ ಮಗ ಮತ್ತು ಗಂಡನನ್ನು ಕಳೆದುಕೊಂಡರು. ಸಜ್ಜನ್ ಕುಮಾರ್ ಅವರು ಮಾಡಿದ ಅನಾಹುತಕಾರಿ ಭಾಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಚಾಮ್ ಕೌರ್ ಅವರು ಕೂಡ ತಮ್ಮ ತಂದೆ ಮತ್ತು ಮಗನನ್ನು ಇದೇ ರೀತಿ ಕಳೆದುಕೊಂಡಿದ್ದರು. ಚಾಮ್ ಕೌರ್ ಅವರ ಮಗ ಕಪೂರ್ ಸಿಂಗ್ ಮತ್ತು ಅಪ್ಪ ಸರ್ದಾರ್ಜಿ ಸಿಂಗ್ ಅವರನ್ನು ಮನೆಯಿಂದ ಹೊರಗೆಳೆದುಕೊಂಡು, ಸಾಯುವ ಹಾಗೆ ಬಡಿದು ಎರಡನೇ ಮಹಡಿಯಿಂದ ಕೆಳಗೆ ಕೆಡವಿ ಹತ್ಯೆಗೈದಿದ್ದರು ಮಾನವೀಯತೆಯನ್ನೇ ಮರೆತಿದ್ದ ಜನರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications