ಮೈಸೂರು; ಹುಟ್ಟು ಹಬ್ಬದ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವಕ
ಮೈಸೂರು, ಜೂನ್ 25; ಹೆತ್ತವರನ್ನು ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕ ತನ್ನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದ.
ಮೃತಪಟ್ಟವರನ್ನು ಮೈಸೂರಿನ ಎನ್. ಆರ್. ಮೊಹಲ್ಲಾ ನಿವಾಸಿ ಕಾರ್ತಿಕ್ (30) ಎಂದು ಗುರುತಿಸಲಾಗಿದೆ. ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿದ್ದ ಕಾರ್ತಿಕ್ ಮಂಡ್ಯದ ಶ್ರೀರಂಗಪಟ್ಟಣ ಸಮೀಪದ ಪಶ್ಚಿಮ ವಾಹಿನಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಕಾರ್ತಿಕ್ ಚಿಕ್ಕಮ್ಮನ ಆಸರೆಯಲ್ಲಿದ್ದ. ಎನ್. ಆರ್. ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ. ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, 'ಸ್ನೇಹಿತರೇ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇನ್ನು ಮುಂದೆ ನಾನು ನಿಮ್ಮೊಂದಿಗೆ ಇರುವುದಿಲ್ಲ' ಎಂದು ಬರೆದಿದ್ದಾನೆ.

3ನೇ ಆತ್ಮಹತ್ಯೆ ಯತ್ನದಲ್ಲಿ ಸಾವು: ಕಾರ್ತಿಕ್ ತಾಯಿ ಪಾರ್ವತಮ್ಮ 21 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಕೌಟುಂಬಿಕ ಕಲಹದಲ್ಲಿ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದರು. ಇದಾದ ಬಳಿಕ 14 ವರ್ಷಗಳ ಹಿಂದೆ ತಂದೆ ಶಿವನಂಜಯ್ಯ ಸಹ ಕುಡಿತದಿಂದ ಸಾವನ್ನಪ್ಪಿದ್ದರು.
ಈ ಘಟನೆಯಿಂದ ಬೇಸತ್ತಿದ್ದ ಯುವಕ ತಾಯಿ ಸಾವನ್ನಪ್ಪಿದ ದಿನ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದ. ತಂದೆ ಸಾವನ್ನಪ್ಪಿದ ದಿನ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777











Click it and Unblock the Notifications