ಮೈಸೂರಿನಲ್ಲಿ ಪ್ರೇಮಿ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ
ಮೈಸೂರು, ಮೇ 09 : ಮೈಸೂರಿನ ಲಿಂಗಾಂಬುಧಿ ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ 5ರಿಂದ 6 ಜನರಿದ್ದ ಯುವಕರ ತಂಡ ಪ್ರೇಮಿ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬುಧವಾರ (ಮೇ 08) ತಡರಾತ್ರಿ 10 ಗಂಟೆಗೆ ನಡೆದಿದೆ.
ಘಟನೆಯ ವಿವರ
ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ ಯುವಕರ ಗುಂಪು ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದೆ. ಮೊದಲು ಯುವಕನ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿ, ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ನಂತರ ಜೊತೆಯಲ್ಲಿದ್ದ ಯುವತಿಯ ಮೇಲೆ ಒಬ್ಬರಾದ ಮೇಲೆ ಒಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಅತ್ಯಾಚಾರದಿಂದ ಗಂಭೀರ ಸ್ಥಿತಿಯಲ್ಲಿರುವ ಯುವತಿ ಮೈಸೂರಿನ ಕೆ.ಜಿ. ಕೊಪ್ಪಲಿನಲ್ಲಿ ವಾಸವಿದ್ದು, ಮೂಲತಃ ಎಚ್.ಡಿ. ಕೋಟೆ ಹ್ಯಾಂಡ್ ಪೋಸ್ಟ್ ನಿವಾಸಿಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಯುವತಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸ್ಥಳಕ್ಕೆ ಎಸ್.ಪಿ. ಅಮಿತ್ ಸಿಂಗ್ ಭೇಟಿ ನೀಡಿದ್ದಾರೆ.

ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರಿಗಳ ಬಂಧನಕ್ಕೆ 8 ವಿಶೇಷ ತಂಡ ರಚನೆ ಮಾಡಲಾಗಿದೆ. ಜಯಪುರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕೃತ್ಯ ನಡೆದಿದ್ದಾಗ ಐದರಿಂದ ಆರು ಜನರಿದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ.
ರಾಜಸ್ಥಾನದ ಆಳ್ವಾರ್ ನಲ್ಲಿ ಇತ್ತೀಚೆಗೆ ನಡೆದ ಘಟನೆಯ ರೀತಿಯಲ್ಲಿಯೇ ಈ ಘಟನೆ ನಡೆದಿರುವುದು ಕರ್ನಾಟಕದ ಜನರು ಬೆಚ್ಚಿಬೀಳುವಂತೆ ಮಾಡಿದೆ. ಆಳ್ವಾರ್ ನಲ್ಲಿ ಗಂಡ ಮತ್ತು ಹೆಂಡತಿಯನ್ನು ಬೆತ್ತಲು ಮಾಡಿದ್ದಲ್ಲದೆ, ಗಂಡನೆದುರೇ ಹೆಂಡತಿಯನ್ನು ಐವರು ದುರುಳರು ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದರು. ಕರ್ನಾಟಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎತ್ತ ಸಾಗುತ್ತಿದೆ? ಪೊಲೀಸರು ಯಾಕೆ ಇನ್ನೂ ದುರುಳರನ್ನು ಬಂಧಿಸಿಲ್ಲ ಎಂದು ಪ್ರಶ್ನಿಸುತ್ತಿದ್ದು, ಇದರಿಂದಾಗಿ ಇಡೀ ಕರ್ನಾಟಕವೇ ತಲೆ ತಗ್ಗಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಾಣಾಪಾಯದಿಂದ ಯುವತಿ ಪಾರು : ಯುವತಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಸಾಮೂಹಿಕ ಅತ್ಯಾಚಾರದಿಂದಾಗಿ ಮಾನಸಿಕವಾಗಿ ತೀವ್ರ ಘಾಸಿಗೀಡಾಗಿದ್ದಾರೆ. ಆಕೆ ಸಹಜ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೂ ಚಿಕಿತ್ಸೆ ನೀಡಲಾಗಿದೆ.












Click it and Unblock the Notifications