ಹಾರಂಗಿ ಜಲಾಶಯದಿಂದ ನದಿಗಳಿಗೆ ನೀರು ಬಿಡುಗಡೆ: KRS ಭಾಗದ ರೈತರ ಮುಖದಲ್ಲಿ ಮಂದಹಾಸ
ಮೈಸೂರು: ಕೊಡಗಿನಲ್ಲಿ ಪುಷ್ಯ ಮಳೆ ಅಬ್ಬರಿಸುತ್ತಿದ್ದು, ಬರಿದಾಗಿದ್ದ ಹಾರಂಗಿ ಜಲಾಶಯ ಭರ್ತಿಯಾಗಿದೆ. ಆದ್ದರಿಂದ ಈ ಜಲಾಶಯದ 4 ಕ್ರಸ್ಟ್‌ಗೇಟ್‌ಗಳ ಮೂಲಕ 5000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದ್ದು, ಇದು ಕೆಆರ್‌ಎಸ್ ಭಾಗದ ಜನರಲ್ಲಿ ಸಂತಸ ಮೂಡಿದೆ.
ಸಾಮಾನ್ಯ ಹಾರಂಗಿಯಿಂದ ಹರಿದ ನೀರು ಹೇಮಾವತಿ ನದಿ, ನಂತರ ಕೆಆರ್‌ಎಸ್ ಸೇರುತ್ತದೆ. ಹಾಗಾಗಿ ಕಾವೇರಿ ತೀರದ ಜನರು ಹರ್ಷಗೊಂಡಿದ್ದದಾರೆ. ಮಡಿಕೇರಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳವಾಗಿದೆ. ಭಾನುವಾರ ಸಂಜೆ ವೇಳೆಗೆ ನೀರಿನ ಒಳಹರಿವು 20,730 ಕ್ಯೂಸೆಕ್‌ನಷ್ಟಿದ್ದು, ಜಲಾಶಯದ ನೀರಿನ ಮಟ್ಟ 2855 ಅಡಿಗಳನ್ನು ತಲುಪಿದೆ. ಈ ಹಿನ್ನೆಲೆ ಜಲಾಶಯದ 4 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ 5000 ಕ್ಯೂಸೆಕ್ ನೀರನ್ನು ಹರಿಸಲಾಗಿದೆ.

ರೈತರಲ್ಲಿ ಮುಖದಲ್ಲಿ ಮಂದಹಾಸ
ಕಾವೇರಿ ನದಿ ತುಂಬಲಾರಂಭಿಸಿದ್ದು, ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಸಕಾಲದಲ್ಲಿ ಮಳೆ ಆಗದ ಕಾರಣ ಕಾವೇರಿ ನದಿಪಾತ್ರದ ರೈತರಲ್ಲಿ ಆತಂಕ ಮನೆ ಮಾಡಿತ್ತು. ರೈತರು ಕಾಲುವೆಗಳಲ್ಲಿ ನೀರು ಹರಿಯವುದನ್ನು ಎದುರುನೋಡುತ್ತಿದ್ದರು. ಇಂತಹ ಆತಂಕದ ನಡುವೆಯೇ ಮುಂಗಾರು ಮಳೆ ತಡವಾಗಿ ಪ್ರಾರಂಭವಾದರೂ ಹಾರಂಗಿ ಅಣೆಕಟ್ಟೆಯಲ್ಲಿ ನೀರು ತುಂಬಿ ನದಿಗಳಿಗೆ ನೀರು ಹರಿಯಬಿಟ್ಟಿದ್ದಾರೆ.
ಕಾವೇರಿ ನದಿಪಾತ್ರದಲ್ಲಿ ಮಳೆ ಆಗುತ್ತಿರುವುದರಿಂದ ಇಲ್ಲಿನ ರೈತರಲ್ಲಿ ಮಂದಹಾಸ ಮನೆ ಮಾಡಿದೆ. ಅಲ್ಲದೆ ರೈತರು ಕೃಷಿ ಚಟುವಟಿಕೆಗಳ ಕಡೆ ಮುಖ ಮಾಡಿದ್ದಾರೆ. ಜುಲೈ 1ರಂದು 2251 ಅಡಿ ಇದ್ದ ಕಬಿನಿ ನೀರಿನ ಮಟ್ಟ ಇದೀಗ 2274 ಅಡಿ ಹೆಚ್ಚಾಗಿದೆ. ಕಬಿನಿ ಗರಿಷ್ಠ ಅಡಿ 2284 ಅಡಿಯಾಗಿದೆ.
ಇನ್ನು ಜುಲೈ 24ರ ಸೋಮವಾರ ಶಾಸಕ ಡಿ.ರವಿಶಂಕರ್ ಚಾಮರಾಜ ಅಣೆಕಟ್ಟೆ, ಶ್ರೀರಾಮ ಅಣೆಕಟ್ಟೆಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವುದರಿಂದ ರೈತರ ಸಂತಸಕ್ಕೆ ಕಾರಣವಾಗಿದೆ.
91 ಅಡಿ ದಾಟಿದ ಕೆಆರ್‌ಎಸ್
ಕಳೆದ ಒಂದು ವಾರದಿಂದ ಕೇರಳ, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಿದೆ. ಹಾಗೆಯೇ ಜಲಾಶಯಗಳ ನೀರಿನ ಮಟ್ಟವೂ ಕೊಂಚ ಏರಿಕೆಯಾಗಿದೆ. ಅದೇ ರೀತಿ ಇದೀಗ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. 124 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಜೂನ್ ಅಂತ್ಯಕ್ಕೆ 76 ಅಡಿ ನೀರು ಸಂಗ್ರಹವಾಗಿತ್ತು.
ಇದೀಗ ಒಳಹರಿವು ವಾರದಿಂದ 10ರಿಂದ 3 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟ 91 ಅಡಿ ಏರಿಕೆ ಕಂಡಿದೆ. ಇದರಿಂದ ಜಲಕ್ಷಾಮದ ಭೀತಿಯಲ್ಲಿದ್ದ ಮೈಸೂರು, ಬೆಂಗಳೂರು ಭಾಗದ ಜನರು ಇದೀಗ ತುಸು ನಿರಾಳರಾಗಿದ್ದಾರೆ.
ಮೈದುಂಬಿ ಹರಿಯುತ್ತಿರುವ ಕಪಿಲಾ
ತಿ.ನರಸೀಪುರ ಭಾಗದ ಪ್ರಮುಖ ನದಿಯಾದ ಕಪಿಲಾ ಕೂಡ ಮೈದುಂಬಿದ್ದಾಳೆ. 15ರಿಂದ 5 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕೇರಳದ ವೈನಾಡಿನಲ್ಲಿ ಬಿದ್ದ ಮಳೆಯೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಕಬಿನಿ ಜಲಾಶಯದ ನೀರಿನ ಮಟ್ಟ ಸುಧಾರಿಸಿದೆ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ ವರುಣದೇವ ಮುನಿಸಿಕೊಂಡಿದ್ದಾನೆ. ಜೂನ್‌ನಲ್ಲಿ ವಾಡಿಕೆಯಂತೆ 94 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು. ಆದರೆ 60 ಮಿ.ಮೀ.ನಷ್ಟು ಮಾತ್ರ ಮಳೆ ಆಗಿದೆ.
ಜುಲೈ ಮೊದಲ ವಾರದಲ್ಲಿ 20 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಸದ್ಯ ದ್ವಿದಳ, ತಂಬಾಕು ಬೆಳೆಗೆ ಅನುಕೂಲವಾಗಿದ್ದರೂ, ಭತ್ತ, ರಾಗಿ, ಕಬ್ಬು ಬೆಳೆಗೆ ನೀರಿನ ಕೊರತೆ ಎದುರಾಗಿದೆ.












Click it and Unblock the Notifications