ಬಂಡೀಪುರ ಕಾಡ್ಗಿಚ್ಚು ಹಿನ್ನೆಲೆ: ಚಾಮುಂಡಿ ಬೆಟ್ಟದಲ್ಲಿ ವಾಚ್ ಟವರ್ ನಿರ್ಮಾಣ
ಮೈಸೂರು, ಮಾರ್ಚ್ 4: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮತ್ತು ಚಾಮುಂಡಿ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಚಾಮುಂಡಿ ಬೆಟ್ಟದಲ್ಲಿ ವಾಚ್ ಟವರ್ ನಿರ್ಮಾಣ ಮಾಡಲು ಮುಂದಾಗಿದೆ.
ಬೆಂಕಿ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ನಂತರ ಚಾಮುಂಡಿ ಬೆಟ್ಟದಲ್ಲೂ ಇದೇ ರೀತಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಾಮುಂಡಿ ಬೆಟ್ಟಕ್ಕೆ 25 ಜನ ಫೈರ್ ವಾಚರ್ಸ್ ನೇಮಕ ಹಾಗೂ 4 ವಾಚ್ ಟವರ್ಸ್ ನಿರ್ಮಾಣ ಮಾಡಲಿದೆ.
ಹಾಗೆಯೇ ಫೈರ್ ವಾಚರ್ಸ್ ಗಳಿಗೆ ವಾಕಿಟಾಕಿ ವ್ಯವಸ್ಥೆ ಮಾಡಲಾಗುತ್ತಿದ್ದು, ಈಗಾಗಲೇ ಬೆಟ್ಟದಲ್ಲಿ ಫೈರ್ ಲೈನ್ ನಿರ್ಮಾಣ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ಮೈಸೂರು ವಿಭಾಗದ ಅರಣ್ಯ ಪ್ರದೇಶಕ್ಕೆ ಬೇಸಿಗೆಯ ಮೂರು ತಿಂಗಳ ಅವಧಿಗೆ 20 ಜನ ಅಧಿಕ ಫೈರ್ ವಾಚರ್ಸ್ ಗಳ ನೇಮಕ ಮಾಡಲಾಗುತ್ತದೆ. ಅರಣ್ಯ ವಲಯ ಸಮೀಪವಿರುವ ಸಾರ್ವಜನಿಕರು ಬೆಂಕಿ ಕಂಡ ತಕ್ಷಣ ಇಲಾಖೆಗೆ ತಿಳಿಸಲು ಹೆಲ್ಪ್ ಲೈನ್ ತೆರೆದಿದ್ದು, ಕರೆ ಮಾಡಿದರೆ ಕೂಡಲೇ ಇಲಾಖಾ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಅರಿವು
ಈಗಾಗಲೇ ಚಾಮುಂಡಿ ಬೆಟ್ಟಕ್ಕೆ ಕ್ವಿಕ್ ರೆಸ್ಪಾನ್ಸ್ ವೆಹಿಕಲ್ ಯೋಜನೆ ಮಾಡಲಾಗಿದ್ದು, ಅಗ್ನಿ ಶಾಮಕದಳದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಬೀದಿ ನಾಟಕಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದರು.

ಬಿಸಿಗೆ ನೀರಿನ ಸಿಂಚನ
ಬಿರು ಬೇಸಿಗೆಯ ಬಿಸಿಗೆ ಮೈಸೂರು ಮೃಗಾಲಯದ ಪ್ರಾಣಿಗಳನ್ನು ರಕ್ಷಿಸಲು ವಿಶೇಷ ಆರೈಕೆ ಮಾಡಲಾಗುತ್ತಿದೆ. ಪ್ರಾಣಿಗಳನ್ನು ತಂಪಾಗಿಸಲು ನೀರಿನ ಸಿಂಚನ, ಮಂಜುಗಡ್ಡೆ, ಕಲ್ಲಂಗಡಿ ಹಣ್ಣನ್ನು ಹೆಚ್ಚು ಹೆಚ್ಚು ಪೂರೈಸಲಾಗುತ್ತಿದೆ.

ನೀರಿನಂಶವಿರುವ ಹಣ್ಣಿನ ಪೂರೈಕೆ
ಮೃಗಾಲಯದಲ್ಲಿರುವ ಪ್ರಾಣಿಗಳ ಹಿತ ಕಾಪಾಡುವುದಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿದ್ದು, ತಂಪಾದ ವಾತಾವರಣ ಸೃಷ್ಟಿಸುವುದರೊಂದಿಗೆ ದೇಹದಲ್ಲಿ ನೀರಿನ ಅಂಶ ಹೆಚ್ಚಿಸುವ ಹಣ್ಣನ್ನು ಪ್ರಾಣಿಗಳಿಗೆ ನೀಡಲಾಗುತ್ತಿದೆ. ಸೂಕ್ಷ್ಮ ಪ್ರಾಣಿಗಳಾದ ಆನೆ, ಜಿರಾಫೆ, ಕರಡಿ, ಜೀಬ್ರಾ, ಹಿಮಾಲಯನ್ ಕರಡಿ, ಚಿಂಪಾಂಜಿ, ಹುಲಿ, ಚಿರತೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ತಂಪಾಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
ಪ್ರಾಣಿಗಳಿಗೆ ಸ್ಪ್ಲಿಂಕರಿಂಗ್ ಮೂಲಕ ನೀರನ್ನು ಚಿಮ್ಮಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಾಣಿಗಳಿರುವ ಆವರಣದಲ್ಲಿ ನೀರು ಚಿಮ್ಮುವುದರಿಂದ ಅಲ್ಲಿನ ವಾತಾವರಣ ತಂಪಾಗಿರುತ್ತದೆ. ಅಲ್ಲದೇ ಪ್ರಾಣಿಗಳ ದೇಹದ ಮೇಲೆ ನೀರು ಚಿಮ್ಮುವುದರಿಂದ ಅವುಗಳ ದೇಹದ ಉಷ್ಣತೆ ಕಡಿಮೆಯಾಗಿ ತಂಪಾಗುವುದಕ್ಕೆ ಸಹಕಾರಿಯಾಗಲಿದೆ. ಎಲ್ಲಾ ಅಂಶಗಳನ್ನೂ ಮನಗಂಡು ಅಧಿಕಾರಿಗಳು ಪ್ರಾಣಿಗಳ ದೇಹ ತಣಿಸಲು ವಿವಿಧ ಕ್ರಮ ಕೈಗೊಂಡಿರುವುದು ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications