'ಸಿದ್ದರಾಮಯ್ಯ ಅವರೇ ಸೋಲೇ ನಿಮ್ಮ ಸಾಧನೆ : ವಿ.ಶ್ರೀನಿವಾಸ ಪ್ರಸಾದ್
ಮೈಸೂರು, ಆಗಸ್ಟ್ 06 : 'ಕರ್ನಾಟಕದಲ್ಲಿ ಕಾಂಗ್ರೆಸ್‌ನ ದುಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ. ನಿಮ್ಮ ಸೋಲೇ ನಿಮ್ಮ ಸಾಧನೆ' ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.
ನಂಜನಗೂಡಿನಲ್ಲಿ ಸೋಮವಾರ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಸಮಾರಂಭ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ ಪ್ರಸಾದ್ ಅವರು, '5 ವರ್ಷ ಸರ್ಕಾರ ನಡೆಸಿದಿರಿ, ಮುಂದಿನ 5 ವರ್ಷವೂ ನಾನೇ ಮುಖ್ಯಮಂತ್ರಿ ಎಂದು ಹೇಳಿದಿರಿ. ಆದರೆ, ಚುನಾವಣೆಯಲ್ಲಿ 36 ಮತದ ಅಂತರದಿಂದ ಸೋಲು ಕಂಡಿರಿ' ಎಂದು ಲೇವಡಿ ಮಾಡಿದರು.
'ಕುಮಾರಸ್ವಾಮಿ ಅವರು ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದಿರಿ. ಈಗ ಅವರ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೀರಿ. ಚುನಾವಣೆಯಲ್ಲಿ ಸೋತ ಬಳಿಕ ಪ್ರಕೃತಿ ಚಿಕಿತ್ಸೆ ಎಂದು ಹೋದಿರಿ' ಎಂದು ಟೀಕಿಸಿದರು.

'ನಾನು, ನನ್ನ ಮಗ ಎಂದು ಸಿದ್ದರಾಮಯ್ಯ ಅವರು ಮೆರೆಯುತ್ತಿದ್ದರು. ನಾನು ನನ್ನ ಅಳಿಯ ಹರ್ಷವರ್ಧನ್ ಇಬ್ಬರು ಸೇರಿ ನಿಮಗೆ ಮಣ್ಣು ಮುಕ್ಕಿಸಿದ್ದೇವೆ. ಜನರು ದೀಪಾವಳಿ ಉಡುಗೊರೆ ಕೊಡುವಂತೆ ನಿಮಗೆ ಸೋಲು ಕೊಟ್ಟಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
'ನನ್ನ ರಾಜಕೀಯ ಜೀವನದಲ್ಲಿ ಜನರಿಗೆ ಗೌರವ ತಂದು ಕೊಟ್ಟಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕಿ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿಯೂ ಗೆಲ್ಲುತ್ತೇವೆ' ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು.
ನಂಜನಗೂಡಿನಲ್ಲಿ ಬಿಜೆಪಿ ಬೆಂಬಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀನಿವಾಸ ಪ್ರಸಾದ್ ಅವರು ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications