ಕಾಲೇಜು ಪ್ರಾಂಶುಪಾಲರ ಕೊಠಡಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ಮೈಸೂರು, ಜುಲೈ 24 : ಕಾಲೇಜಿನ ಕೊಠಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ದಾಖಲೆಗಳು ಸೇರಿದಂತೆ ಇತರೆ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಕಿತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಈ ಕಾಲೇಜಿನ ಆವರಣದಲ್ಲಿ ಪ್ರತಿನಿತ್ಯ ಸಂಜೆ 5 ಗಂಟೆಯ ನಂತರ ಗ್ರಾಮದ ಯುವಕರ ಗುಂಪೊಂದು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಪ್ರತಿನಿತ್ಯ ಆವರಣದಲ್ಲಿ ಮದ್ಯದ ಖಾಲಿ ಬಾಟಲಿ ಎಸೆದು ಹೋಗುವುದು, ಇಸ್ಪೀಟ್ ಆಡುವುದು ಮಾಡುತ್ತಿದ್ದು, ಈ ಪುಂಡರೇ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕಿಡಿಗೇಡಿಗಳ ಕೃತ್ಯದ ಕುರಿತು ಬೆಟ್ಟದಪುರ ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿ ಕೆಲವು ಅಡ್ಡೆಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ, ಕಾಲೇಜಿನ ಆವರಣದಲ್ಲಿ ಮಾತ್ರ ಪುಂಡರ ಹಾವಳಿ ನಿಂತಿರಲಿಲ್ಲ.

ಇದೀಗ ಕಾಲೇಜಿನ ಪ್ರಾಂಶುಪಾಲರ ಕೊಠಡಿಗೆ ಬೆಂಕಿ ಹಚ್ಚಿ, ದಾಖಲೆಗಳನ್ನು ನಾಶ ಮಾಡಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ದಾಖಲೆಗಳು ನಾಶವಾಗಿರುವುದರಿಂದ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.
ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಸಿದ್ದಯ್ಯ, ಪಿಎಸ್‍ಐ ಚಿಕ್ಕಸ್ವಾಮಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.











Click it and Unblock the Notifications