ಮಂಟಿಬಿಳಗುಲಿಯಲ್ಲಿ ಸ್ನಾನಕ್ಕೆಂದು ಕೆರೆಗಿಳಿದ ಯುವಕರು ಶವವಾದರು
ಪಿರಿಯಾಪಟ್ಟಣ, ಅಕ್ಟೋಬರ್.18: ಕೆರೆಯಲ್ಲಿ ಸ್ನಾನ ಮಾಡಲು ಹೋದ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಮಂಟಿಬಿಳಗುಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಬುಧವಾರ ಬೆಳಿಗ್ಗೆ ಶವ ಪತ್ತೆಯಾಗಿದ್ದು, ಮಣಿಕಂಠ (30) ಹಾಗೂ ತಿಮ್ಮನಾಯಕ (28) ಎಂಬುವರೇ ಸಾವನ್ನಪ್ಪಿದ ದುರ್ದೈವಿಗಳು.
ಇವರಿಬ್ಬರು ಮಂಗಳವಾರ ಸಂಜೆ 4ರ ವೇಳೆಯಲ್ಲಿ ವ್ಯಕ್ತಿಯೊಬ್ಬರ ಶವ ಸಂಸ್ಕಾರ ಮುಗಿಸಿ ಮಂಟಿಬಿಳಗುಲಿ ಗ್ರಾಮದಲ್ಲಿದ್ದ ಕೆರೆಗೆ ಸ್ನಾನಕ್ಕಿಳಿದಿದ್ದರು. ಆದರೆ ಬಹಳಷ್ಟು ಹೊತ್ತಾದರೂ ವಾಪಾಸ್ ಬರಲಿಲ್ಲ. ಕೆರೆಯ ದಡದಲ್ಲಿ ಉಡುಪು, ಚಪ್ಪಲಿ ಹಾಗೂ ಮೊಬೈಲ್‌ಗಳನ್ನು ಗುರುತಿಸಿದ ಸ್ಥಳೀಯರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಸಂಶಯಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕದಳದವರು ಕೆರೆಯಲ್ಲಿ ಶೋಧಕಾರ್ಯ ನಡೆಸಿದರಾದರೂ ಶವಗಳು ಪತ್ತೆಯಾಗಲಿಲ್ಲ. ಕತ್ತಲಾದ ಕಾರಣ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿ, ಬುಧವಾರ ಬೆಳಿಗ್ಗೆ ಮತ್ತೆ ಶೋಧನಾಕಾರ್ಯ ಆರಂಭಿಸಿದರು.

ಈಜುಪರಿಣಿತರಾದ ಕುಶಾಲನಗರದ ರಾಮಕೃಷ್ಣ ಹಾಗೂ ಹುಣಸೂರಿನ ಫಕೀರ ಅವರನ್ನು ಕರೆಯಿಸಿ ಸುಮಾರು ಒಂದೂವರೆ ಗಂಟೆ ಕಾಲ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಎರಡು ಶವಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ವಾರಸುದಾರರಿಗೆ ನೀಡಲಾಯಿತು.












Click it and Unblock the Notifications