ಮಹಾ ಕುಂಭಮೇಳ ಮಾತ್ರವಲ್ಲ, ಕರ್ನಾಟಕದ ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿ
ಮಂಡ್ಯ, ಫೆಬ್ರವರಿ 17: ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ನಮ್ಮಲ್ಲಿ ಬಂದಿದ್ದು ಅದರಂತೆ ಕೆಲವೇ ಕೆಲವು ಸಂಗಮ ಕ್ಷೇತ್ರಗಳು ಪುಣ್ಯ ಸ್ಥಾನವೆಂದು ನಂಬಲಾಗಿದೆ. ಈ ಪೈಕಿ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಅಂಬಿಗರಹಳ್ಳಿ ಬಳಿಯ ಹೇಮಾವತಿ, ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವೂ ಒಂದಾಗಿದೆ.
ಈಗಾಗಲೇ ಉತ್ತರ ಪ್ರದೇಶ ರಾಜ್ಯದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು ಪ್ರತಿದಿನವೂ ಕೋಟ್ಯಂತರ ಜನರು ಗಂಗೆಯಲ್ಲಿ ಮಿಂದೇಳುತ್ತಿದ್ದಾರೆ. ಇತ್ತ ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ತ್ರಿವೇಣಿ ಸಂಗಮದಲ್ಲಿಯೂ ಈಗಾಗಲೇ ಕುಂಭಮೇಳ ನಡೆದಿದ್ದು ಲಕ್ಷಾಂತರ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ.

ಈ ನಡುವೆ ದೂರಕ್ಕೆ ಹೋಗಲಾಗದವರು ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ, ಕಾವೇರಿ ಹಾಗೂ ಲಕ್ಷ್ಮಣತೀರ್ಥ ಮೂರೂ ಜೀವಂತ ನದಿಗಳು ಒಂದಾಗಿ ಸೇರುವ ಅಂಬಿಗರಹಳ್ಳಿ ಸಮೀಪದ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಾಕು, ಆರೋಗ್ಯ, ಸುಖ ಶಾಂತಿ, ಸಮೃದ್ಧಿ ಉಂಟಾಗುತ್ತದೆ ಎಂಬುದನ್ನು ಸ್ನಾನ ಮಾಡುವುದರ ಮೂಲಕ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೆ ಕುಂಭಮೇಳ ನಡೆಸಿದ್ದನ್ನು ನಾವು ಸ್ಮರಿಸಬಹುದಾಗಿದೆ.
ಈ ಕುರಿತಂತೆ ಮಾತನಾಡಿರುವ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ನಾನು ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆ.ಆರ್.ಪೇಟೆ ತಾಲೂಕಿನ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಬೇಕೆಂಬ ಆಸೆಯಿತ್ತು, ಅದು ಇಂದು ಈಡೇರಿದೆ. ಪವಾಡ ಪುರುಷರಾದ ಶ್ರೀ ಮಲೈ ಮಹದೇಶ್ವರರು ಬಾಲಕರಾಗಿದ್ದಾಗ ಪವಾಡ ಮಾಡಿದ ಪುಣ್ಯ ಕ್ಷೇತ್ರವೇ ಈ ಪವಿತ್ರ ತ್ರಿವೇಣಿ ಸಂಗಮವಾಗಿದೆ.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತ್ರಿವೇಣಿ ಸಂಗಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಮಾಡಿಕೊಡುವ ಮೂಲಕ ಭಕ್ತರನ್ನು ಆಕರ್ಷಿಸುವ ಕೆಲಸ ಮಾಡಬೇಕು. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ತೆರೆಯ ಮರೆಯಲ್ಲಿರುವ ಅಂಬಿಗರಹಳ್ಳಿ, ಪುರ, ಸಂಗಾಪುರ ಗ್ರಾಮಗಳ ಸಮೀಪದಲ್ಲಿರುವ ಪವಿತ್ರ ತ್ರಿವೇಣಿ ಸಂಗಮವು ದೇಶದ ಪ್ರಯಾಗ್ ರಾಜ್ ಹೊರತುಪಡಿಸಿದರೆ ಮೂರೂ ಜೀವಂತ ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರವಾಗಿದೆ.
ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿಯ ಸಂಗಮ
ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೈಜೋಡಿಸಿ ಕೆಲಸ ಮಾಡಿ ಮಂಡ್ಯ ಜಿಲ್ಲೆಯಲ್ಲಿರುವ ಅಪರೂಪದ ತೀರ್ಥ ಕ್ಷೇತ್ರವನ್ನು ವಿಶ್ವಮಟ್ಟಕ್ಕೆ ಬೆಳಗಿಸುವ ಕೆಲಸ ಮಾಡಬೇಕು. ಇದರಿಂದ ಸಂಗಮ ಕ್ಷೇತ್ರಕ್ಕೆ ಭಕ್ತರು ಆಗಮಿಸಲು ಅನುಕೂಲವಾಗುವಂತೆ ರಸ್ತೆ, ಶುದ್ಧ ಕುಡಿಯುವ ನೀರು, ಸ್ನಾನ ಗೃಹ, ಬಟ್ಟೆ ಬದಲಿಸುವ ಕೊಠಡಿ, ಯಾತ್ರಿ ನಿವಾಸ ಕಟ್ಟಡದ ವಿಸ್ತರಣೆ ಸೇರಿದಂತೆ ಸಮುದಾಯ ಭವನ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದಿದ್ದಾರೆ. ಇದೇ ವೇಳೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ನಂತರ ಬಾಲಕ ಮಹದೇಶ್ವರಮೂರ್ತಿ, ಹಾಗೂ ಶ್ರೀ ಸಂಗಮೇಶ್ವರ ಸ್ವಾಮಿಯ ಮೂರ್ತಿಗಳಿಗೆ ಲೋಕಕಲ್ಯಾಣಕ್ಕಾಗಿ ಸ್ವಾಮೀಜಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಂಗಮದ ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ, ನಿಸರ್ಗ ರಮಣೀಯ ಮಾತ್ರವಲ್ಲದೆ, ದೈವಿಕ ಕ್ಷೇತ್ರವೂ ಇದಾಗಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಕೊಡಗು, ಮೈಸೂರು, ಹಾಸನಕ್ಕಾಗಿ ಹರಿದು ಅಂಬಿಗರಹಳ್ಳಿಗೆ ಬರುವ ಕಾವೇರಿಗೆ ದಕ್ಷಿಣ ಕೊಡಗಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಇರ್ಪು ಮೂಲಕ ಧುಮುಕಿ ನಾಗರಹೊಳೆ ಅರಣ್ಯಕ್ಕಾಗಿ ಹರಿದು ಮೈಸೂರು ಮೂಲಕ ಹರಿದು ಅಂಬಿಗರಹಳ್ಳಿಯಲ್ಲಿ ಕಾವೇರಿಯನ್ನು ಸಂಗಮವಾಗುತ್ತದೆ.
ಇದೆರಡು ನದಿಗಳು ಕೊಡಗಿನಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ಹುಟ್ಟಿ ಪ್ರತ್ಯೇಕವಾಗಿ ಹರಿದು ಬಂದು ಇಲ್ಲಿ ಸಂಗಮವಾಗುವುದು ವಿಶೇಷ. ಇನ್ನು ಇದೆರಡು ನದಿಗೆ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮಘಟ್ಟದ ಶ್ರೇಣಿಯಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಮೂಲಕ ಹರಿದು ಬರುವ ಹೇಮಾವತಿ ನದಿ ಕೂಡ ಅಂಬಿಗರಹಳ್ಳಿ ಬಳಿಯೇ ಸಂಗಮವಾಗುತ್ತದೆ. ಒಟ್ಟಾರೆ ಈ ಮೂರು ನದಿಗಳು ಸಂಗಮವಾಗುವ ಈ ಕ್ಷೇತ್ರ ಪರಮಪಾವನ ಎಂಬುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications