ಗುಂಡ್ಲುಪೇಟೆಯಲ್ಲಿ ಬಿಜಯಂಗೈಯಲು ಗೀತಾಗೆ ದಿಗ್ವಿಜಯ್ ಆಹ್ವಾನ
ಮಾಜಿ ಸಚಿವ ದಿವಂಗತ ಎಚ್.ಎಸ್ ಮಹದೇವ ಪ್ರಸಾದ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ಅಚ್ಚರಿಯ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕೂತೂಹಲ ಮೂಡಿಸಿದೆ.
ಮೈಸೂರು, ಫೆಬ್ರವರಿ 1: ಮಾಜಿ ಸಚಿವ ದಿವಂಗತ ಎಚ್.ಎಸ್ ಮಹದೇವ ಪ್ರಸಾದ್ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅಚ್ಚರಿಯ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕೂತೂಹಲ ಮೂಡಿಸಿದೆ.
ಮೈಸೂರಿನ ಕುವೆಂಪುನಗರದಲ್ಲಿರುವ ದಿವಂಗತ ಎಚ್.ಎಸ್ ಮಹದೇವ ಪ್ರಸಾದ್ ಅವರ ನಿವಾಸಕ್ಕೆ ಬುಧವಾರ ದಿಗ್ವಿಜಯ್ ಸಿಂಗ್ ಭೇಟಿ ನೀಡಿದರು. ಬೇಟಿ ವೇಳೆ ಮಹದೇವ ಪ್ರಸಾದ್ ಪತ್ನಿ ಗೀತಾರವರ ಜೊತೆ ಸುದೀರ್ಘ ಮಾತುಕತೆ ನಡೆಸಿದರು.
ಸದ್ಯದಲ್ಲೆ ಮಹದೇವ ಪ್ರಸಾದ್ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು ದಿಗ್ವಿಜಯ್-ಗೀತಾ ಮಾತುಕತೆ ತೀವ್ರ ಚರ್ಚೆಗೆ ಕಾರಣವಾಗಿದೆ.[ಗುಂಡ್ಲುಪೇಟೆ ಚುನಾವಣಾ ಅಖಾಡಕ್ಕೆ ಗೀತಾ ಮಹದೇವ್ ಪ್ರಸಾದ್]

ಉಪ ಚುನಾವಣೆ
ಸಚಿವರಾಗಿದ್ದ ಮಹದೇವ ಪ್ರಸಾದ್ ನಿಧನದಿಂದ ಗುಂಡ್ಲುಪೇಟೆ ಶಾಸಕ ಸ್ಥಾನ ಖಾಲಿಯಾಗಿದ್ದು ಸದ್ಯದಲ್ಲೇ ಉಪ ಚುನಾವಣೆ ನಡೆಯಲಿದೆ. ಮಾರ್ಚ್ ಎರಡನೇ ವಾರದೊಳಗೆ ಚಾಮರಾಜನಗರದ ಗುಂಡ್ಲುಪೇಟೆ ಹಾಗೂ ಮೈಸೂರಿನ ನಂಜನಗೂಡಿಗೆ ಉಪ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದ್ದು ಏಪ್ರಿಲಿನಲ್ಲಿ ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ಗೀತಾ ಮಹದೇವ ಪ್ರಸಾದ್ ಕಣಕ್ಕೆ
ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಮಹದೇವ್ ಪ್ರಸಾದ್ ಪತ್ನಿ ಗೀತಾ ಕಣಕ್ಕಿಳಿಯುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿಯೇ ದಿಗ್ವಿಜಯ್ ಸಿಂಗ್ ಭೇಟಿ ನೀಡಿದ್ದಾರೆ.
ಗೀತಾ ಮಹದೇವ ಪ್ರಸಾದ್ ಗೆ ಸಾಂತ್ವನ ಹೇಳಿದ ದಿಗ್ವಿಜಯ್, "ಗುಂಡ್ಲುಪೇಡೆಯಲ್ಲಿ ಮಹದೇವ ಪ್ರಸಾದ್ ಅವರ ಸ್ಥಾನ ತುಂಬಲು ಪಕ್ಷ ನಿಮ್ಮನ್ನು ಕಣಕ್ಕಿಳಿಸಲು ಯೋಚಿಸಿದೆ. ಈಗಾಗಲೇ ಸಿದ್ದರಾಮಯ್ಯ ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಈ ಅವಕಾಶ ಸದುಪಯೋಗಪಡಿಸಿಕೊಂಡು ಜನಸೇವೆಗೆ ಮುಂದಾಗಬೇಕು," ಎಂದು ಅವರು ಹೇಳಿದರು.

ಗೌಪ್ಯ ಮಾತುಕತೆ
ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಹಾರ ತುರಾಯಿಗಳನ್ನು ನಿರಾಕರಿಸಿದ ದಿಗ್ವಿಜಯ್ ಸಿಂಗ್ ನೇರ ಮನೆಗೆ ತೆರಳಿದರು. ಮಾಧ್ಯಮಗಳು ಹಾಗೂ ಕಾರ್ಯಕರ್ತರನ್ನು ಹೊರಗಿಟ್ಟು ಗೀತಾ ಜತೆ ದೀರ್ಘ ಕಾಲ ದಿಗ್ವಿಜಯ್ ಸಿಂಗ್ ಮಾತುಕತೆ ನಡೆಸಿದರು.

ಸುಳಿವು ನೀಡಿದ್ದ ಸಿದ್ದರಾಮಯ್ಯ
ಗೀತಾ ಕಣಕ್ಕಿಳಿಯುವ ಸೂಚನೆಯನ್ನು ಸಿದ್ದರಾಮಯ್ಯ ಈ ಹಿಂದೆಯೇ ನೀಡಿದ್ದರು. ಮಹದೇವ ಪ್ರಸಾದ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೇ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮಹದೇವಪ್ರಸಾದ್ ಅವರ ಸ್ಥಾನವನ್ನು ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆ ಸ್ಥಾನವನ್ನು ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಂದ ಮಾತ್ರ ತುಂಬಲು ಸಾಧ್ಯ. ಅವರು ಪತಿ ಹಾಕಿದ ಹಾದಿಯಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣ ಮಾಡಲಿದ್ದಾರೆ," ಎಂದಿದ್ದರು. ಈಗ ದಿಗ್ವಿಜಯ್ ಸಿಂಗ್ ಕೂಡಾ ಭೇಟಿ ನೀಡಿದ್ದು ಗೀತಾ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ದಿಗ್ವಿಜಯ್ ಸಿಂಗ್-ದೇವೇಗೌಡ ಮುಖಾಮುಖಿ
ಮೈಸೂರಿಗೆ ಆಗಮಿಸಿದ್ದ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಪ್ರಧಾನಿ ದೇವೇಗೌಡರು ವಿಶ್ರಾಂತಿಗಾಗಿ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ವೇಳೆ ಪರಸ್ಪರ ಮುಖಾಮುಖಿಯಾದರು. ಈ ಸಂದರ್ಭ ಉಭಯ ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು.












Click it and Unblock the Notifications