ಮೈಸೂರಿನಲ್ಲಿ ಸುಖಾಸುಮ್ಮನೆ ಜಗಳ ಸೃಷ್ಟಿಸಿ 25 ಲಕ್ಷ ಎಗರಿಸಿದ ಖದೀಮರು
ಮೈಸೂರು, ಸೆಪ್ಟೆಂಬರ್. 24 : "ಏನೋ ಗಾಡಿಯಲ್ಲಿ ನಮಗೇ ಚಮಕ್ ಕೊಡುತ್ತೀಯಾ" ಎಂದು ಜಗಳ ಆರಂಭಿಸುವ ಮೂಲಕ ಮೂವರು ಖದೀಮರು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವರ್ತಕರೊಬ್ಬರ ಗಮನವನ್ನು ಬೇರೆಡೆ ಸೆಳೆದು 25 ಲಕ್ಷ ರೂ.ಗಳನ್ನು ದೋಚಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ವಿಜಯನಗರ 4ನೇ ಹಂತದ ನಿವಾಸಿ ಅರುಣ್ ಕುಮಾರ್ ಅವರೇ ಖದೀಮರ ವ್ಯವಸ್ಥಿತ ಲೂಟಿಯಲ್ಲಿ ಭಾರೀ ಮೊತ್ತವನ್ನು ಕಳೆದುಕೊಂಡವರು. ಅರುಣ್ ಕುಮಾರ್ ವಿದೇಶಿ ಕರೆನ್ಸಿ ವಿನಿಮಯ ವ್ಯವಹಾರ ನಡೆಸುತ್ತಿದ್ದು, ಶಿವರಾಂಪೇಟೆಯಲ್ಲಿ ಕಚೇರಿ ಹೊಂದಿದ್ದಾರೆ.
ತಮ್ಮ ಕಚೇರಿ ಮುಗಿದ ಬಳಿಕ ಆ ದಿನದ ವಹಿವಾಟಿನ ಮೊತ್ತವಾದ 19 ಲಕ್ಷ ರೂ. ಭಾರತೀಯ ಕರೆನ್ಸಿ ಮತ್ತು 6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಟ್ಟುಕೊಂಡು ಮನೆಗೆ ವಾಪಸಾಗುತ್ತಿ ದ್ದರು.

ಅವರು ವಿಜಯನಗರ 1ನೇ ಹಂತ, 3ನೇ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು, ಅರುಣ್ ಅವರನ್ನು ತಡೆದು ನಿಲ್ಲಿಸಿದ್ದಾರೆ. ನಂತರ ಜಗಳ ತೆಗೆದಿದ್ದಾರೆ. ಆಗ ಅರುಣ ಅವರು, ನಾನೆಲ್ಲಪ್ಪ ಚಮಕ್ ಕೊಟ್ಟೆ' ಎಂದಿದ್ದಾರೆ. ಆದರೂ ಇಬ್ಬರೂ ಖದೀಮರು ಜಗಳ ಮುಂದುವರಿಸಿದ್ದಾರೆ.
ಅಷ್ಟರಲ್ಲೇ ರಸ್ತೆ ಬದಿ ನಿಂತಿದ್ದ ಅವರದೇ ಗುಂಪಿನ ಮತ್ತೊಬ್ಬ ವ್ಯಕ್ತಿಯೂ ವಾಹನದ ಬಳಿ ಬಂದು ಅರುಣ್ ಅವರನ್ನು ಬೈಯ್ಯಲಾರಂಭಿಸಿದ್ದಾನೆ. ಆಗ ಅರುಣ್ ಅವರು ಹೊಸಬನಿಗೆ ಪ್ರತಿಕ್ರಿಯಿಸಲು ಮುಂದಾಗಿದ್ದಾರೆ.
ಇನ್ನು ಅದೇ ಸಮಯ ಕಾಯುತ್ತಿದ್ದ ಖದೀಮರಿಬ್ಬರು ಅರುಣ್ ಅವರ ದ್ವಿಚಕ್ರ ವಾಹನದ ಕೀಲಿಕೈ ಕಿತ್ತುಕೊಂಡಿದ್ದಾರೆ. ಅಷ್ಟರವರೆಗೂ ಸ್ಕೂಟರ್ ಮೇಲೇ ಕುಳಿತಿದ್ದ ಅರುಣ್ ಅವರನ್ನು ವಾಹನದಿಂದ ಕೆಳಕ್ಕೆ ದೂಡಿ ಬೀಳಿಸಿದ್ದಾರೆ.
ಕೆಳಕ್ಕೆ ಬಿದ್ದ ಅರುಣ್ ಮೇಲೆದ್ದು ಸಾವರಿಸಿಕೊಳ್ಳುವಷ್ಟರಲ್ಲೇ ಮತ್ತೊಬ್ಬ ದುಷ್ಕರ್ಮಿ ಅರುಣ್ ಅವರ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಉಳಿದಿಬ್ಬರು ಖದೀಮರೂ ಜಾಗ ಖಾಲಿ ಮಾಡಿದ್ದಾರೆ.
ಇದೆಲ್ಲದರಿಂದ ಆಘಾತಕ್ಕೊಳಗಾದ ಅರುಣ್ ಅವರು ನಡೆಯುತ್ತಲೇ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶೋಧ ನಡೆಸಿದರೂ ಖದೀಮರ ತಂಡ ಪತ್ತೆಯಾಗಲಿಲ್ಲ.
ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಾತ್ರಿ ವೇಳೆ ನಗದು ಕೊಂಡೊಯ್ಯುವ ವರ್ತಕರನ್ನೇ ಗುರಿಯಾಗಿರಿಸಿಕೊಂಡು ಚಾಲಾಕಿತನದಿಂದ ದೋಚುವ ಹೊಸ ತಂಡ ಹುಟ್ಟಿಕೊಂಡಿರುವ ಶಂಕೆ ಮೂಡಿದೆ. ಪೊಲೀಸರ ತನಿಖೆಯಿಂದ ಈ ಬಗ್ಗೆ ಹೆಚ್ಚಿನ ವಿಚಾರ ತಿಳಿದು ಬರಬೇಕಿದೆ.












Click it and Unblock the Notifications