• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರಾ ಹಿನ್ನೆಲೆ: ರತ್ನಖಚಿತ ಸಿಂಹಾಸನ ಜೋಡಣೆಗೆ ಕ್ಷಣಗಣನೆ ಆರಂಭ

|

ಮೈಸೂರು, ಅಕ್ಟೋಬರ್. 3 : ಅರಸೊತ್ತಿಗೆ ಹೋಗಿ ಪ್ರಜಾಪ್ರಭುತ್ವ ಸ್ಥಾಪನೆಯಾದ ಮೇಲೆ ಅಂದು ನಡೆಯುತ್ತಿದ್ದ ದಸರಾ(ನವರಾತ್ರಿ) ನಾಡಹಬ್ಬವಾಗಿ ಪರಿವರ್ತನೆಗೊಂಡು ಜನರ ದಸರಾ ಆಗಿದೆ. ಅಂದಿನ ಪರಂಪರೆ ಜೊತೆಗೆ ಆಧುನಿಕತೆಯ ಮೆರುಗು ನೀಡಿ ಸರ್ಕಾರವೇ ದಸರಾ ಮಹೋತ್ಸವವನ್ನು ನಾಡಹಬ್ಬವಾಗಿ ಆಚರಿಸುತ್ತಿದೆ.

ಅಂಬಾರಿ ಹೊರುವ ಅರ್ಜುನನಿಗೆ ಭಾರ ಹೊರುವ ತಾಲೀಮು: ಸಾಥ್ ಕೊಟ್ಟ ವಿಜಯ, ಕಾವೇರಿ, ಚೈತ್ರಾ

ರಾಜವಂಶಸ್ಥರು ಖಾಸಗಿಯಾಗಿ ಅರಮನೆಯಲ್ಲಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಅಂದಹಾಗೆ ಐತಿಹಾಸಿಕ ಸಿಂಹಾಸನವನ್ನು ಭದ್ರತಾ ಕೊಠಡಿಯಿಂದ ಹೊರತೆಗೆದು ಅ.4ರಂದು ಬೆಳಗ್ಗೆ ನವಗ್ರಹ ಹೋಮ, ಶಾಂತಿಪೂಜೆ ಬಳಿಕ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಾಡಹಬ್ಬದ ಜತೆಗೆ ಖಾಸಗಿ ದರ್ಬಾರ್ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಅರಮನೆಯಲ್ಲಿ ಯದುವಂಶದ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ಖಾಸಗಿ ದರ್ಬಾರ್ ಗೆ ಸಿದ್ಧತೆಗಳು ಜೋರಾಗಿ ಸಾಗುತ್ತಿವೆ.

27ನೇ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಂಪರೆಯ ಸಂಪ್ರದಾಯ ಮುಂದುವರಿಸಿದ್ದು, ರತ್ನಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇದು ಅವರ 4ನೇ ದರ್ಬಾರ್ ಆಗಿದೆ. ಪುತ್ರ ಆದ್ಯ ಯದುವೀರ್ ಜನನದ ನಂತರ ಮೊದಲ ದರ್ಬಾರ್ ಆಗಿದೆ.

ಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿ

ಖಾಸಗಿ ದರ್ಬಾರ್ ನ ಕಾರ್ಯಕ್ರಮಗಳು

ಅ.10ರಂದು ಯದುವೀರ್ ಗೆ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣೆ. ನಂತರ ಶುಭ ಘಳಿಗೆಯಲ್ಲಿ ಯದುವೀರ್ ಸಿಂಹಾಸನಾರೋಹಣ. ಅ.18ರಂದು ಚಂಡೀಹೋಮ. ನಂತರ ಕೋಡಿಸೋಮೇಶ್ವರ ದೇವಾಲಯಕ್ಕೆ ಪಟ್ಟದ ಆನೆ, ಕುದುರೆ, ಹಸು, ಆಯುಧಗಳ ರವಾನೆ.

ಪೂಜೆ ಬಳಿಕ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧಪೂಜೆ. ರಾತ್ರಿ 7 ಗಂಟೆಗೆ ಖಾಸಗಿ ದರ್ಬಾರ್ ಮುಕ್ತಾಯವಾಗಿ ಸಿಂಹಾಸನದ ಸಿಂಹ ವಿಸರ್ಜನೆ.

ಅ.19ರಂದು ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಶಮಿ ಪೂಜೆ. ಭುವನೇಶ್ವರಿ ದೇವಾಲಯದಿಂದ ವಿಜಯ ಯಾತ್ರೆ ಆರಂಭಗೊಂಡು ಸಿಂಹಾಸನದ ವಿಸರ್ಜನೆ ಮೂಲಕ ದಸರೆಗೆ ತೆರೆ ನೀಡಲಾಗುವುದು.

ನಾಡಹಬ್ಬ ವೀಕ್ಷಿಸಲು ರಾಯಲ್ ಎಂಟ್ರಿಯ ಗೋಲ್ಡನ್ ಕಾರ್ಡ್ ಬಿಡುಗಡೆ

ಸಿಂಹಾಸನದ ವಿಶೇಷತೆ ಏನು ?

ರತ್ನಖಚಿತ ಸಿಂಹಾಸನವನ್ನು ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ತೆಗೆದು ಜೋಡಿಸಿ ಇದನ್ನು ರಾಜವಂಶಸ್ಥರ ಖಾಸಗಿ ದರ್ಬಾರಿಗೆ ಬಳಸಲಾಗುವುದು. ನಂತರ ಇದನ್ನು ಸ್ವಲ್ಪ ದಿನ ಸಾರ್ವಜನಿಕ ದರ್ಶನಕ್ಕೂ ಅವಕಾಶ ನೀಡಲಾಗುವುದು.

ಕರಿಮರ, ದಂತ, ಚಿನ್ನ, ಬೆಳ್ಳಿಗಳಿಂದ ನಿರ್ಮಿಸಿ ಈ ಸಿಂಹಾಸನಕ್ಕೆ ಬೆಲೆಬಾಳುವ ವಜ್ರ, ಮುತ್ತು, ರತ್ನಗಳನ್ನು ಅಳವಡಿಸಲಾಗಿದೆ. ಅನುವಂಶಿಕ ಸಿಂಹಾಸನವನ್ನು ರಾಜವಂಶಸ್ಥರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ರಾಜಸಭೆಯ ಸಮಯದಲ್ಲಿ ಮೊದಲು ಪೂಜೆ ಸಲ್ಲಿಸಿ ಆರೋಹಣ ಮಾಡುವರು.

ಸಿಂಹಾಸನದ ಜೋಡಣೆ ಕಾರ್ಯವನ್ನು ಗೆಜ್ಜಗಳ್ಳಿ ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದಾರೆ.

English summary
The historic throne is removed from the security room on October 4. Then Navagraha Homa and Shanti Pooja are performed. After that the jeweled throne is attached.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X