ರಾಜ್ ಕುಟುಂಬಸ್ಥರು ಅವಕಾಶ ಕೊಟ್ಟರೆ ಶಕ್ತಿಧಾಮದ ಸ್ವಯಂ ಸೇವಕನಾಗಿರುತ್ತೇನೆ: ತಮಿಳು ನಟ ವಿಶಾಲ್
ಮೈಸೂರು, ಸೆಪ್ಟೆಂಬರ್ 10: ನೊಂದ ಹೆಣ್ಣು ಮಕ್ಕಳಿಗೆ ಆಶ್ರಯದ ಜೊತೆಗೆ ಆತ್ಮವಿಶ್ವಾಸ ಮೂಡಿಸುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ಶನಿವಾರ ಖ್ಯಾತ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ.
ರಾಜ್‌ಕುಮಾರ್ ಕುಟುಂಬ ಆರಂಭಿಸಿದ್ದ ಈ ಶಕ್ತಿಧಾಮದಲ್ಲಿ ಸಾವಿರಾರು ಹೆಣ್ಣಮಕ್ಕಳು ಆಶ್ರಯ ಪಡೆದಿದ್ದರು. ಪುನೀತ್ ಅಕಾಲಿಕ ನಿಧನ ನಂತರ ವಿಶಾಲ್ ಅವಕಾಶ ಕೊಟ್ಟರೆ ಈ ಶಕ್ತಿಧಾಮದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತೇನೆಂದು ಹೇಳಿದ್ದರು. ಇದೀಗ ಮೊದಲ ಬಾರಿಗೆ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ.
ಶನಿವಾರ ಶಕ್ತಿಧಾಮದ ಭೇಟಿ ನೀಡಿ ಮಕ್ಕಳೊಂದಿಗೆ ಕೆಲಕಾಲ ಕಳೆದ ವಿಶಾಲ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ" ಸಿನಿಮಾದ ಶೂಟಿಂಗ್ ವೇಳೆ ನನಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಇಷ್ಟ ದಿನ ಶಕ್ತಿಧಾಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ನಾನು ಈಗ ಬರಲೇ ಬೇಕು ಅಂತ ನಿರ್ಧಾರ ಮಾಡಿ ಇಂದು ಬಂದಿದ್ದೇನೆ. ಅದನ್ನು ಬಿಟ್ಟರೆ ವಿಶೇಷ ಏನು ಇಲ್ಲ. ಮಕ್ಕಳನ್ನು ನೋಡಬೇಕೆಂಬ ಒಂದೇ ಒಂದು ಉದ್ದೇಶದಿಂದ ಬಂದಿದ್ದೇನೆ ಅಷ್ಟೆ. ಎಲ್ಲರನ್ನು ಭೇಟಿ ಮಾಡಿದ್ದು ನನಗೆ ಸಾಕಷ್ಟು ಸಂತಸ ಉಂಟು ಮಾಡಿದೆ. ನಾನು ಯಾವಾಗಲು ಶಕ್ತಿಧಾಮದ ಸ್ವಯಂ ಸೇವಕನಾಗಿಲು ಬಯಸುತ್ತೇನೆ. ಅದಕ್ಕೆ ರಾಜ್ ಕುಟುಂಬದವರು ಅನುಮತಿ ನೀಡಬೇಕೆಂದು" ಮನವಿ ಮಾಡಿಕೊಂಡರು.

ಶಕ್ತಿಧಾಮ ನನಗೆ ದೇವಸ್ಥಾನದ ಅನುಭವ ನೀಡಿತು. ದೇವಸ್ಥಾನಕ್ಕೆ ಹೋದರೆ ಒಂದು ದೇವರ ದರ್ಶನ ಪಡೆಯಬಹುದು. ಇಲ್ಲಿ ಒಂದೊಂದು ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ. ಪುನೀತ್ ರಾಜ್ ಕುಮಾರ್ ಹಾಗೂ ಗೀತಮ್ಮ ಅವರದ್ದು ಅತ್ಯುತ್ತಮವಾದ ಕೆಲಸ. ಎಲ್ಲರಿಗೂ ಈ ಮನಸ್ಸು ಬರಲ್ಲ. ಅವರ ಅದ್ಭುತವಾದ ಕಾರ್ಯ ಮಾಡಿದ್ದಾರೆ ಈ ಬಗ್ಗೆ ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ರಾಜ್‌ಕುಮಾರ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರ ಈ ಅತ್ಯುತ್ತಮ ಕಾರ್ಯದಲ್ಲಿ ಕೈಜೋಡಿಸಲು ಬಯಸುತ್ತೇನೆ ಎಂದರು.
ಮಕ್ಕಳ ಬಗ್ಗೆ ಮಾತನಾಡಿ, "ಶಕ್ತಿಧಾಮದ ಮಕ್ಕಳ ಜೊತೆ ನಾನು ಮಾತನಾಡಿದೆ. ಈ ಮಕ್ಕಳು ತುಂಬಾ ಲವಲವಿಕೆಯಿಂದ ಇದ್ದಾರೆ. ನನ್ನ ಜೊತೆ ಡ್ಯಾನ್ಸ್ ಮಾಡಿದರು, ಆಟವಾಡಿದರು, ತುಂಬಾ ಉತ್ಸಾಹದಿಂದ ಇದ್ದಾರೆ. ಇಲ್ಲಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ," ಎಂದರು.
ದಿವಂಗತ ನಟ ಪುನೀತ್ ರಾಜ್ ಕುಮಾರ್‌ಗೆ ಶಕ್ತಿಧಾಮದ ಮಕ್ಕಳಿಗೆ ಸ್ವತಃ ಶಾಲೆ ಮಾಡುವ ಆಸೆ ಇತ್ತು. ಆದರೆ, ಅವರ ಅಕಾಲಿಕ ನಿಧನದಿಂದ ಈ ಆಸೆ ನೆರವೇರಲಿಲ್ಲ. ಇದೀಗ ಗೀತಾ ಶಿವರಾಜ್ ಕುಮಾರ್ ಆ ಕಾರ್ಯಕ್ಕೆ ಮತ್ತೆ ಚಾಲನೆ ನೀಡಿದ್ದಾರೆ. ನಟ ವಿಶಾಲ್ ಕೂಡ ಶಾಲೆ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ.












Click it and Unblock the Notifications