ಮೈಸೂರು ಜಿಲ್ಲೆಯಲ್ಲಿ ಹಂದಿ ಜ್ವರದ ಭೀತಿ, ಆರೋಗ್ಯ ಇಲಾಖೆಯಿಂದ ಸೂಚನೆ
ಮೈಸೂರು, ಅಕ್ಟೋಬರ್.31: ಮೈಸೂರು ಜಿಲ್ಲೆಯಲ್ಲಿ ಹಂದಿ ಜ್ವರದ ಭೀತಿ ಎದುರಾಗಿದ್ದು , ಜನವರಿಯಿಂದ ಇಲ್ಲಿಯವರೆಗೆ 27 ಪ್ರಕರಣಗಳಲ್ಲಿ ಹೆಚ್ 1 ಎನ್ 1 ಸೋಂಕು ಪತ್ತೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೂ ಪರೀಕ್ಷೆಗೊಳಪಟ್ಟ 435 ಮಂದಿಯಲ್ಲಿ 27 ಮಂದಿಗೆ ಈ ರೋಗದ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ . ಕಳೆದ ವರ್ಷ ಪರೀಕ್ಷೆಗೊಳಪಟ್ಟ 930 ರೋಗಿಗಳ ಪೈಕಿ 255 ಮಂದಿಯಲ್ಲಿ ಹೆಚ್ 1 ಎನ್ 1 ಸೋಂಕು ಪತ್ತೆಯಾಗಿತ್ತು. ಈ ವರ್ಷದಲ್ಲಿ ಜನವರಿಯಿಂದ ಆಗಸ್ಟ್ ವರೆಗೆ ಕೇವಲ ಒಬ್ಬರಿಗೆ ಮಾತ್ರ ಕಾಣಿಸಿಕೊಂಡಿದ್ದ ಈ ಸೋಂಕು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಲವರಲ್ಲಿ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದೆ.
ಸೆಪ್ಟೆಂಬರ್ ನಲ್ಲಿ 10, ಅಕ್ಟೋಬರ್ ನಲ್ಲಿ 15 ಪ್ರಕರಣಗಳಲ್ಲಿ ಹೆಚ್ 1 ಎನ್ 1 ಪತ್ತೆಯಾಗಿದೆ. ಈ ಭಯಾನಕ ರೋಗದ ನಿಯಂತ್ರಣಕ್ಕಾಗಿ ಮೈಸೂರು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಟ್ಯಾಮಿಫ್ಲೂ ಮಾತ್ರೆಗಳನ್ನು ದಾಸ್ತಾನು ಮಾಡಿಕೊಳ್ಳಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಜೊತೆಗೆ ಎಲ್ಲಾ ತಾಲ್ಲೂಕು ಸರ್ಕಾರಿ ಆಸ್ಪತ್ರೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಕರಣಗಳಿಗೆ ಪ್ರತ್ಯೇಕ ಹಾಸಿಗೆ ವ್ಯವಸ್ಥೆಗೆ ಇಲಾಖೆ ಕ್ರಮ ಕೈಗೊಂಡಿದೆ.
ಜ್ವರ, ತೀವ್ರವಾದ ಕೆಮ್ಮು , ಶೀತ, ಗಂಟಲು ನೋವು , ವಾಂತಿ - ಬೇಧಿ ಉಸಿರಾಟದ ತೊಂದರೆ , ಮೈಕೈ ನೋವು ಈ ರೀತಿ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಶೀಘ್ರವೇ ಆಸ್ಪತ್ರೆಗೆ ಭೇಟಿ ನೀಡಲು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಇನ್ನು ಈ ಸೋಂಕು ತಗುಲದಂತೆ ಎಚ್ಚರವಹಿಸಲು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ಸಹ ನೀಡಿದೆ.
ಸೋಂಕು ತಗುಲಿದವರು ಕೆಮ್ಮು ಹಾಗೂ ಸೀನು ಬಂದಾಗ ಕರವಸ್ತ್ರ ಬಳಸುವುದು ಅಥವಾ ತೋಳನ್ನು ಅಡ್ಡ ಹಿಡಿಯಬೇಕು. ನಿಮ್ಮ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿದ ನಂತರ ಕೈಗಳನ್ನು ತೊಳೆಯಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.
ಪೌಷ್ಟಿಕ ಆಹಾರ ಸೇವಿಸಿ ಶುದ್ಧವಾದ ನೀರನ್ನು ಹೆಚ್ಚಾಗಿ ಕುಡಿಯುವ ಬಗ್ಗೆ ಜಾಗೃತಿ ವಹಿಸಬೇಕೆಂಬ ಸಲಹೆಗಳನ್ನು ನೀಡಲಾಗಿದೆ.
ಜೊತೆಗೆ ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳಬಾರದು. ರಸ್ತೆಯಲ್ಲಿ ಎಲ್ಲೆಂದರಲ್ಲಿ ಉಗುಳಬಾರದು. ಸೋಂಕು ಇದ್ದಲ್ಲಿ ಅನವಶ್ಯಕವಾಗಿ ಪ್ರಯಾಣಿಸಬಾರದು ಎಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ.












Click it and Unblock the Notifications