ಕಬ್ಬಿಣವಿಲ್ಲದೆ ಮನೆ ಕಟ್ಟಬಹುದೇ? ಹೌದು ಎನ್ನುತ್ತದೆ ಈ ಸಂಶೋಧನೆ!
ಮೈಸೂರು, ಡಿಸೆಂಬರ್ 13; ಜಾಗತೀಕರಣದ ಪರಿಣಾಮ ಜಗತ್ತೇ ಒಂದು ಮಾರುಕಟ್ಟೆಯಾಗಿದೆ. ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟುವುದು ದೊಡ್ಡ ಸವಾಲಾಗಿದೆ. ಕಬ್ಬಿಣ, ಸಿಮೆಂಟ್, ಮರಳಿನ ದರ ಚಿನ್ನದ ದರದೊಂದಿಗೆ ಪೈಪೋಟಿ ನಡೆಸುತ್ತಿವೆ. ಆದರೆ ಮೈಸೂರಿನಲ್ಲಿ ಕಬ್ಬಿಣವಿಲ್ಲದೆ ಮನೆ ಕಟ್ಟಬಹುದು. ಉಕ್ಕಿಗೆ ಪರ್ಯಾಯವಾಗಿ ಬಿದಿರನ್ನು ಬಳಸಬಹುದು ಎಂದು ಸಂಶೋಧನೆಯಿಂದ ಕಂಡು ಹಿಡಿಯಲಾಗಿದೆ.
ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಇದನ್ನು ಕಂಡು ಹಿಡಿದಿದ್ದು, ಪ್ರಾಯೋಗಿಕವಾಗಿ ಯಶ ಕಂಡಿದ್ದಾರೆ. ನೆತ್ತಿಯ ಮೇಲೊಂದು ಸ್ವತಃ ಸೂರು ಕಟ್ಟಿಕೊಳ್ಳಬೇಕೆಂಬುದು ಪ್ರತಿಯೊಬ್ಬರ ಕನಸು. ಆದರೆ, ಮಧ್ಯಮ ವರ್ಗ ಅಂದುಕೊಂಡಷ್ಟು ಸುಲಭವಾಗಿ ಮನೆ ಕಟ್ಟಿಕೊಳ್ಳಲು ಸ್ಥಿತಿ ಸದ್ಯಕ್ಕಂತೂ ಇಲ್ಲ.
ಒಂದು ಮನೆ ಸುಭದ್ರವಾಗಿ ನೆಲೆ ನಿಲ್ಲಬೇಕೆಂದರೆ ಕಬ್ಬಿಣ, ಇಟ್ಟಿಗೆ, ಮರಳು ತುಂಬಾ ಅವಶ್ಯ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿಣದ ದರ ಶೇ 55 ರಷ್ಟು ಹೆಚ್ಚಾಗಿದೆ. ಮರಳು ಒಂದು ಲಾರಿಗೆ 50 ಸಾವಿರ ದರವಿದೆ. 30/40 ಮನೆ ಕಟ್ಟಲು ಕನಿಷ್ಠ 5 ಲಾರಿ ಮರಳು ಬೇಕು. ಒಂದು ಟನ್ ಕಬ್ಬಿಣಕ್ಕೆ 68 ಸಾವಿರ ಇದೆ. 30/40 ಮನೆ ಕಟ್ಟಲು ಫಿಲ್ಲರ್ ಬೇಡ ಅಂದರೆ ಕನಿಷ್ಠ 5 ಟನ್ ಕಬ್ಬಿಣ ಬೇಕು. ಹೀಗಿರುವಾಗ ಮಧ್ಯಮ ವರ್ಗಕ್ಕೆ ಮನೆ ಕಟ್ಟುವುದೇ ಗಗನ ಕುಸುಮವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿದ್ಯಾರ್ಥಿಗಳ ಸಂಶೋಧನೆ ಹೊಸ ಆಶಾಭಾವನೆ ಮೂಡಿಸಿದೆ.

ಏನಿದು ಸಂಶೋಧನೆ?; ಒಂದು ಟನ್ ಕಬ್ಬಿಣ ತಯಾರಿಸಲು ಸುಮಾರು 2.4 ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್ ಪರಿಸರ ಸೇರುತ್ತದೆ, ಅದೇ ಬಿದಿರನ್ನು ಬಳಸಿ ಮಾಡಿದ ಸ್ಲ್ಯಾಬ್‌ಗಳೂ ಅಷ್ಟೇ ಗಟ್ಟಿಯಾಗಿದ್ದು, ಸುಮಾರು 700 ಕೆಜಿ ಯಷ್ಟು ಭಾರ ತಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಪ್ರಸ್ತುತ ಒಂದು ಅಂತಸ್ತಿನ ಕಟ್ಟಡಕ್ಕೆ ಇದು ಹೆಚ್ಚು ಸೂಕ್ತವಾಗಿದೆ ಎಂಬುದು ತಂತ್ರಜ್ಞಾನ ಸಂಶೋಧಿಸಿದ ವಿದ್ಯಾರ್ಥಿಗಳ ಅಭಿಪ್ರಾಯ. ಸದ್ಯ ಈ ಪ್ರಯೋಗಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯು ವರ್ಷದ ಉತ್ತಮ ಆವಿಷ್ಕಾರ ಎಂದು ಪರಿಗಣಿಸಿದೆ. ಅಲ್ಲದೆ ಈ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ.
ಭಾರದ ತಡೆಯಲು ಯಶಸ್ವಿ: ಚಾವಣಿಯ ಸ್ಲ್ಯಾಬ್‌ಗೆ ಕಬ್ಬಿಣ ಹಾಕುವ ಬದಲು ಬಿದಿರಿನಲ್ಲಿ ಕೋಳಿ ಪಂಜರದ ರೀತಿ ಎಣಿಸಿ ಅದಕ್ಕೆ 2.5 ಸೆ.ಮೀ. ಕಾಂಕ್ರೀಟ್ ತುಂಬಿದ ಬಳಿಕ ಸಮತಲ ಮತ್ತು ಲಂಬಾಕಾರವಾಗಿ ಸುಮಾರು 700 ಕೆಜಿ ಯಷ್ಟು ಭಾರ ಹಾಕಿ ಪರೀಕ್ಷಿಸಲಾಗಿದೆ.
"ಇಷ್ಟೂ ತೂಕವನ್ನು ಸಮರ್ಥವಾಗಿ ತಡೆದಿರುವುದು ಪ್ರಯೋಗಶಾಲೆಯಲ್ಲೂ ಸಾಬೀತಾಗಿದೆ. ಆದರೆ ರೂಫ್ ಸ್ಲ್ಯಾಬ್‌ಗೆ ಬೇಕಿರುವುದು 300 ಕೆಜಿ/ ಮೀಟರ್ ಚದರ ಅಡಿಯಷ್ಟೆ. ಇದಕ್ಕಿಂತಲೂ ಎರಡು ಪಟ್ಟು ಅಧಿಕ ಕ್ಷಮತೆ ಬಿದಿರಿಗಿದೆ. ಇದಲ್ಲದೆ ಕಂಬ, ಗೋಡೆಗಳಿಗೂ ಇದೇ ಪ್ರಯೋಗ ಮಾಡಿದ್ದು, ಲೋಡ್ ತಡೆಯುವಲ್ಲಿ ಶಕ್ತವಾಗಿದೆ'' ಎಂದು ಈ ಪ್ರಾಜೆಕ್ಟ್‌ನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದ ಪ್ರೊ. ಉಮೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ನಿಶಾಂತ್, ಕಾರ್ತಿಕ್ ಎಂ. ಪಿ. ಮತ್ತು ಮಹೇಂದ್ರ ಹಳಮಂಡಗೆ, ಚಿರಾಗ್ ಎಚ್. ಆರ್. ಯೋಜನೆ ರೂವಾರಿಗಳಾಗಿದ್ದು, ಉಕ್ಕಿನ ಬದಲಿಗೆ ಸ್ಥಳೀಯವಾಗಿ ಲಭ್ಯವಿರುವ ಬಿದಿರನ್ನು ಬಳಸಿ ಈ ಆವಿಷ್ಕಾರ ಮಾಡಿದ್ದಾರೆ.
ಕಬ್ಬಿಣ, ಮರಳು, ಇಟ್ಟಿಗೆ, ಕೂಲಿ ದುಬಾರಿಯಾಗಿ ಮನೆ ಕಟ್ಟುವುದು ಹೇಗೆ? ಎಂದು ಚಿಂತಿಸುವ ಜನರಿಗೆ ಈ ಸಂಶೋಧನೆ ಸಹಕಾರಿಯಾಗಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯಬೇಕಿದೆ.












Click it and Unblock the Notifications