ಎಚ್. ಡಿ. ದೇವೇಗೌಡರ ಬೀಗರ ಮನೆಯಲ್ಲಿ ಸಿದ್ದರಾಮಯ್ಯ ಉಪಹಾರ!
Recommended Video
ಮೈಸೂರು, ಸೆಪ್ಟೆಂಬರ್ 16 : ಮೈಸೂರಿನ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರ ಬೀಗರಾದ ಪ್ರೊ. ಕೆ. ಎಸ್. ರಂಗಪ್ಪ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಹಾರ ಸೇವಿಸಿದರು.
ಮೈಸೂರು ಪ್ರವಾಸದಲ್ಲಿರುವ ಬಾದಾಮಿ ಶಾಸಕ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಬೋಗಾದಿಯಲ್ಲಿರುವ ಪ್ರೊ. ಕೆ. ಎಸ್. ರಂಗಪ್ಪ ಮನೆಗೆ ಭೇಟಿ ನೀಡಿದರು. ಅಲ್ಲಿಯೇ ಉಪಹಾರ ಸವಿದು ಕೆಲವು ಹೊತ್ತು ರಂಗಪ್ಪ ಜೊತೆ ಮಾತುಕತೆ ನಡೆಸಿದರು.
ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್. ಡಿ. ದೇವೇಗೌಡರ ನಡುವಿನ ಸಂಬಂಧ ಹಳಸಿದೆ. ಇಬ್ಬರ ನಡುವೆ ಆರೋಪ ಪ್ರತ್ಯಾರೋಪ ಸಹ ನಡೆದಿತ್ತು. ಈಗ ದೇವೇಗೌಡರ ಬೀಗರ ಮನೆಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಪ್ರೊ. ಕೆ. ಎಸ್. ರಂಗಪ್ಪ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಚಾಮರಾಜ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋಲು ಕಂಡಿದ್ದರು. ಸೋಲಿನ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ.

ಯಾವುದೇ ರಾಜಕೀಯವಿಲ್ಲ
ಸಿದ್ದರಾಮಯ್ಯ ಭೇಟಿ ಬಗ್ಗೆ ಪ್ರೊ. ಕೆ. ಎಸ್. ರಂಗಪ್ಪ ಹೇಳಿಕೆ ನೀಡಿದ್ದಾರೆ. "ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಸಿದ್ದರಾಮಯ್ಯ ಅವರಂಥ ಒಳ್ಳೆಯವರು ಮತ್ತೆ ಸಿಎಂ ಆಗಬೇಕು. ಯಾರೇ ಒಳ್ಳೆಯ ಕೆಲಸ ಮಾಡಿದರೂ ನಾನು ಅವರನ್ನು ಬೆಂಬಲಿಸುವೆ" ಎಂದು ಸ್ಪಷ್ಟನೆ ನೀಡಿದರು.

ನಾನು ಅವರ ಪರವಾಗಿ ಇರುತ್ತೇನೆ
"ನಾನು ರಾಜಕೀಯವಾಗಿ ಸಕ್ರಿಯವಾಗಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಜೆಡಿಎಸ್ ನನ್ನನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ನಾನು ಈಗ ಮುಕ್ತವಾಗಿದ್ದೇನೆ. ಯಾರು ನನ್ನ ಅನುಭವವನ್ನು ಗೌರವದಿಂದ ಬಳಸಿಕೊಳ್ಳುತ್ತಾರೋ ಅವರ ಪರವಾಗಿ ಇರುತ್ತೇನೆ. ಈಗ ನಾನು ರಾಜಕೀಯಕ್ಕಿಂತ ಸಂಶೋಧನೆಗೆ ಆದ್ಯತೆ ನೀಡುತ್ತಿದ್ದೇನೆ" ಎಂದು ಪ್ರೊ. ಕೆ. ಎಸ್. ರಂಗಪ್ಪ ಹೇಳಿದರು.

ನಾನೇ ಮನೆಗೆ ಆಹ್ವಾನಿಸಿದ್ದೆ
"ನನ್ನ ಶಿಷ್ಯನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬಂದಿದ್ದರು. ಆಗ ನಾನೇ ಉಪಹಾರಕ್ಕೆ ಆಗಮಿಸುವಂತೆ ಅವರನ್ನು ಮನೆಗೆ ಆಹ್ವಾನಿಸಿದ್ದೆ. ಅವರು ಸೌಜನ್ಯದಿಂದ ಬಂದಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನನಗೆ ಯಾರೇ ಸಲಹೆ ಕೇಳಿದರೂ ಕೊಡಲು ಸಿದ್ಧವಾಗಿದ್ದೇನೆ. ಬಿಜೆಪಿ, ಕಾಂಗ್ರೆಸ್ ಎಂಬ ಪಕ್ಷ ಬೇಧವಿಲ್ಲ" ಎಂದು ಪ್ರೊ. ಕೆ. ಎಸ್. ರಂಗಪ್ಪ ತಿಳಿಸಿದರು.

ಚುನಾವಣೆಯಲ್ಲಿ ಸೋಲು
ಪ್ರೊ. ಕೆ. ಎಸ್. ರಂಗಪ್ಪ 2018ರ ವಿಧಾನಸಭೆ ಚುನಾವಣೆಗೆ ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಎಲ್. ನಾಗೇಂದ್ರ ವಿರುದ್ಧ 36,747 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಸೋಲಿನ ಬಳಿಕ ಪಕ್ಷದ ಚಟುವಟಿಕೆಗಳಿಂದಲೂ ಅವರು ದೂರವಾಗಿದ್ದಾರೆ.












Click it and Unblock the Notifications