ನಿಪಾ ವೈರಸ್: ಮಂಡ್ಯ, ಮಡಿಕೇರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪನೆ
ಮೈಸೂರು, ಮೇ 23 : ಕೇರಳದ ಎರಡು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ನಿಪಾ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಕೂಡಾ ಕಟ್ಟೆಚ್ಚರಿಕೆ ವಹಿಸಲಾಗಿದೆ. ಒಂದೊಮ್ಮೆ ಶಂಕಿತ ವೈರಸ್ ಸೋಂಕಿತರು ಪತ್ತೆಯಾದರೆ ಅವರಿಗೆ ಚಿಕಿತ್ಸೆ ನೀಡಲೆಂದು ಮಂಡ್ಯ, ಗುಂಡ್ಲುಪೇಟೆ ಹಾಗೂ ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ವಾರ್ಡ್ ಗಳನ್ನು ಸೃಜಿಸಲಾಗಿದೆ.
ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಈ ಮೂರು ಜಿಲ್ಲೆಗಳೂ ಕೇರಳದ ಗಡಿಗೆ ಹೊಂದಿಕೊಂಡಂತಿವೆ. ಹೀಗಾಗಿ ಸಹಜವಾಗಿಯೇ ಪ್ರವಾಸಿಗರ ಓಡಾಟ, ವ್ಯಾಪಾರ ವಹಿವಾಟು ಹೆಚ್ಚು. ಈ ಹಿನ್ನೆಲೆಯಲ್ಲಿ ಒಂದೊಮ್ಮೆ ನಿಪಾ ವೈರಸ್ ಈ ಜಿಲ್ಲೆಗಳಿಗೂ ಹರಡಿದರೆ ಎಂಬ ಕಾರಣಕ್ಕಾಗಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಪ್ರತ್ಯೇಕ ವಾರ್ಡ್ ಗಳನ್ನು ಸೃಜಿಸಲಾಗಿದೆ.

ಈ ವಾರ್ಡ್ ಗಳನ್ನು ಐಸೋಲೇಶನ್ ವಾರ್ಡ್ ಗಳೆಂದು ಕರೆಯಲಾಗುವುದು. ರೋಗ ಇನ್ನೊಬ್ಬರಿಗೆ ಹರಡದಿರಲಿ ಎಂಬ ಕಾರಣಕ್ಕಾಗಿ ಇಲ್ಲಿ ಪ್ರತ್ಯೇಕವಾಗಿ ಶಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ವ್ಯವಸ್ಥೆ ಇರುವುದಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಪೋರ್ಕ್ ಆಮದು ನಿಷೇಧ?
ಈ ನಡುವೆ ಕೇರಳದ ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈ ರೋಗಾಣು ಹಂದಿಗಳ ಮೂಲಕ ಕೂಡಾ ಹರಡಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿಬಿ ಕಾವೇರಿ ಜಿಲ್ಲೆಯಿಂದ ಹಂದಿ ಉತ್ಪನ್ನಗಳ ಆಮದು-ರಫ್ತು ಸಂಪೂರ್ಣ ನಿಷೇಧ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.












Click it and Unblock the Notifications