ಮೈಸೂರು-ಚೆನ್ನೈ ನಡುವೆ ಸೆಮಿ ಸ್ಪೀಡ್ ರೈಲು ಸಂಚಾರ
ಮೈಸೂರು, ಜೂ.05 : ಮೈಸೂರು ಮತ್ತು ಚೆನ್ನೈ ನಡುವೆ ಸೆಮಿ ಹೈಸ್ಪೀಡ್ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ಗಂಟೆಗೆ 160 ರಿಂದ 200 ಕಿ.ಮೀ.ವೇಗದಲ್ಲಿ ಸಂಚಾರ ನಡೆಸಲಿದ್ದು, ಇದರಿಂದ ಪ್ರಯಾಣದ ಅವಧಿ ಶೇ20ರಷ್ಟು ಉಳಿತಾಯವಾಗಲಿದೆ.
ಗುರುವಾರ ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ರೈಲ್ವೆ ಮಂಡಳಿಯ ವಿದ್ಯುತ್ ವಿಭಾಗದ ಸಲಹೆಗಾರ ಜೆ.ಎಸ್.ಪಿ. ಸಿಂಗ್ ಅವರು, ಎಲ್ಲಾ ಮಾರ್ಗಗಳಲ್ಲಿ ಬುಲೆಟ್ ರೈಲುಗಳ ಸಂಚಾರ ಸಾಧ್ಯವಿಲ್ಲ, ಆದ್ದರಿಂದ ರೈಲುಗಳ ವೇಗ ಹೆಚ್ಚಿಸಿ ಸೆಮಿ ಹೈಸ್ಪೀಡ್ ರೈಲು ಓಡಿಸಲಾಗುತ್ತದೆ ಎಂದರು. [ಮೈಸೂರು-ಬೆಂಗ್ಳೂರು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ]

ಮೈಸೂರು-ಚೆನ್ನೈ ನಡುವೆ ಸೆಮಿ ಹೈಸ್ಪೀಡ್ ರೈಲುಗಳ ಸಂಚಾರಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾತ್ರಿ ವೇಳೆಯಲ್ಲಿ ಹೆಚ್ಚುವರಿಯಾಗಿ 16 ರೈಲುಗಳು ಸಂಚಾರ ನಡೆಸಲಿದ್ದು, ಈ ರೈಲಿನ ವೇಗ ಗಂಟೆಗೆ 160 ರಿಂದ 200 ಕಿ.ಮೀ. ಇರಲಿದೆ ಎಂದು ವಿವರಣೆ ನೀಡಿದರು. [76 ಕಿ.ಮೀ.ನೂತನ ಮಾರ್ಗದ ಕಾಮಗಾರಿ ಆರಂಭಿಸಲಿದೆ ರೈಲ್ವೆ]
ರೈಲ್ವೆ ನಿಲ್ದಾಣದಲ್ಲಿ ಸೋಲಾರ್ ಛಾವಣಿ : ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ರೈಲ್ವೆ ಇಲಾಖೆ ಆದ್ಯತೆ ನೀಡುತ್ತಿದೆ. ರಾಯ್‌ಬರೇಲಿ ಸೇರಿದಂತೆ ದೇಶದ ಕೆಲವು ಸೌರವಿದ್ಯುತ್ ಉತ್ಪಾದನಾ ಘಟಕಗಳಿಂದ 10 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 1 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಇಲಾಖೆ ಹೊಂದಿದೆ. ಇದಕ್ಕಾಗಿ ರೈಲ್ವೆ ನಿಲ್ದಾಣಗಳ ಛಾವಣಿಗಳಲ್ಲಿ ಸೋಲಾರ್ ಘಟಕ ಅಳವಡಿಸಲಾಗುವುದು ಎಂದು ಹೇಳಿದರು.












Click it and Unblock the Notifications