ಕೆಎಸ್‌ಟಿಡಿಸಿ ವತಿಯಿಂದ ಮೈಸೂರು-ತಿರುಪತಿ ಪ್ರವಾಸ ಪುನರಾರಂಭ
ಮೈಸೂರು, ಫೆಬ್ರವರಿ 5: ಕೊರೊನಾ ಸೋಂಕಿನ ಭೀತಿಯಿಂದ ಕಳೆದ ಮಾರ್ಚ್ ಅಂತ್ಯದಿಂದಲೇ ಸ್ಥಗಿತಗೊಂಡಿದ್ದ ಮೈಸೂರು-ತಿರುಪತಿ ಪ್ಯಾಕೇಜ್ ಅನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಪುನರಾರಂಭಿಸಿದೆ. ಇದೇ ಫೆ.9ರಿಂದ ಮೊದಲ ಪ್ರವಾಸ ನಿಗದಿಯಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ)ದಿಂದ ಮೈಸೂರಿನಿಂದ ತಿರುಪತಿಗೆ 2 ದಿನಗಳ ಪ್ರವಾಸಕ್ಕೆ 2,585 ರೂ. ಹಾಗೂ 3 ದಿನಗಳ ಪ್ರವಾಸಕ್ಕೆ 3,960 ರೂ. ದರ ನಿಗದಿ ಮಾಡಲಾಗಿದೆ. 2 ದಿನಗಳ ಪ್ಯಾಕೇಜ್‌ನಲ್ಲಿ ತಿರುಪತಿ, ಮಂಗಾಪುರ ಹಾಗೂ 3 ದಿನಗಳ ಪ್ಯಾಕೇಜ್‌ನಲ್ಲಿ ತಿರುಪತಿ, ಮಂಗಾಪುರ, ಕಾಳಹಸ್ತಿ ಮತ್ತು ಸ್ಥಳೀಯ ದೇವಾಲಯಗಳ ದರ್ಶನ ಪಡೆಯಬಹುದಾಗಿದೆ.
ಉಪಹಾರ, ಊಟ ಹೊರತುಪಡಿಸಿ ದರ್ಶನಕ್ಕೆ ಟಿಕೆಟ್ ಹಾಗೂ ತಂಗಲು ಕೊಠಡಿಗಳ ವ್ಯವಸ್ಥೆ ಎಲ್ಲವನ್ನೂ ಅಭಿವೃದ್ಧಿ ನಿಗಮವೇ ನೋಡಿಕೊಳ್ಳಲಿದೆ.

ಸದ್ಯ 2 ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗುತ್ತಿದ್ದು, ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುವುದು. ಸದ್ಯ ಈಗಾಗಲೇ 20 ಮಂದಿ ಮುಂಗಡ ಕಾಯ್ದಿರಿಸಿದ್ದಾರೆ. 39 ಮಂದಿ ಕಾಯ್ದಿರಿಸಿದರೆ ಒಂದು ಟ್ರಿಪ್ ಹೊರಡಲಿದೆ. ನಂತರ ಬಳಿಕ ಮತ್ತೆ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೈಸೂರು ವಿಭಾಗದ ವ್ಯವಸ್ಥಾಪಕ ಚೇತನ್ ಹೇಳಿದ್ದಾರೆ.
ʻಮೈಸೂರು-ತಿರುಪತಿ ಸಂಚಾರ ಪುನರಾರಂಭಿಸುವಂತೆ ಕಳೆದ 4 ತಿಂಗಳುಗಳಿಂದರೂ ಪ್ರವಾಸಿಗರಿಂದ ಒತ್ತಡ ಬರುತ್ತಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರ ಪ್ಯಾಕೇಜ್ ಟೂರ್ ಆರಂಭಿಸುವಂತೆ ಅನುಮತಿ ದೊರೆತಿದ್ದು, ಫೆ.4ರಿಂದ ನಿರಂತರ ಪ್ರವಾಸ ಆರಂಭವಾಗಲಿದೆ' ಎಂದರು.
ಸಾರ್ವಜನಿಕರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವೆಬ್‌ಸೈಟ್ ಮೂಲಕ ಅಥವಾ ಜೆಎಲ್‌ಬಿ ರಸ್ತೆಯಲ್ಲಿರುವ ಪ್ರವಾಸೋದ್ಯಮ ಕಚೇರಿಗೆ ಬಂದು ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹಿರಿಯ ನಾಗರಿಕರಿಗೆ ಶೇ.20ರಷ್ಟು ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2423652, ಮೊ. 8970650070 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ವಿಭಾಗದ ವ್ಯವಸ್ಥಾಪಕ ಚೇತನ್ ಅವರು ತಿಳಿಸಿದ್ದಾರೆ.












Click it and Unblock the Notifications