ಸಂಘ ಪರಿವಾರದ ಬಿಜೆಪಿ ಸರ್ಕಾರ ಗುಜರಿಗೆ ಹಾಕಿ: ದೇವನೂರು ಮಹದೇವ
ಮೈಸೂರು, ಏಪ್ರಿಲ್ 25: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾಡಿರುವ ಖ್ಯಾತ ಸಾಹಿತಿ ದೇವನೂರು ಮಹದೇವ ಅವರು ಸಂಘ ಪರಿವಾರದ ಈ ಸರ್ಕಾರವನ್ನು ಗುಜರಿಗೆ ಹಾಕಬೇಕು. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎನ್ನುವುದು ಮುಖ್ಯವಲ್ಲ. ಮೊದಲು ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.
ಎದ್ದೇಳು ಕರ್ನಾಟಕ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ದೇವನೂರ ಮಹಾದೇವ, ಮತದಾರರು ಹೆಚ್ಚು ಜಾಗೃತರಾಗಿದ್ದಾರೆ. ಇದುವರೆಗೆ ಇಷ್ಟು ಜಾಗೃತರಾಗಿರಲಿಲ್ಲ. ಡಬಲ್ ಎಂಜಿನ್ ಸರ್ಕಾರ ಅಂತಾ ಕೇಳಿ ಕೇಳಿ ಕಿವಿ ತೂತು ಆಗಿದೆ. ಡಬಲ್ ಎಂಜಿನ್ ಸರ್ಕಾರ ಅಂತಾ ಹೇಳಿ ಅಭಿವೃದ್ಧಿಯ ಬುಡ ಅಲ್ಲಾಡಿಸುತ್ತಿದ್ದಾರೆ ಎಂದು ಗುಡುಗಿದರು.

ಬಿಜೆಪಿ ಬಾಯಿ ಬಿಟ್ರೆ ಕಾಂಗ್ರೆಸ್ ಏನ್ ಮಾಡಿತು ಎಂದು ಕೇಳುತ್ತಾರೆ. ಆದರೆ ಸಾರ್ವಜನಿಕ ಆಸ್ತಿಗಳನ್ನು ಕಾಂಗ್ರೆಸ್ ರಕ್ಷಣೆ ಮಾಡಿದೆ. ಡಬಲ್ ಎಂಜಿನ್‌ನ ಒಂದು ಎಂಜಿನ್‌ನಲ್ಲಿ ಧರ್ಮದ ದ್ವೇಷ, ಇನ್ನೊಂದು ಎಂಜಿನ್‌ನಲ್ಲಿ 40% ಕಮಿಷನ್ ಸೌಂಡ್ ಮಾಡ್ತಿದೆ ಅಷ್ಟೆ. ಹೀಗಾಗಿ ಬಿಜೆಪಿ ಸರ್ಕಾರವನ್ನು ಗುಜರಿಗೆ ಹಾಕಬೇಕಿದೆ ಎಂದು ಹೇಳಿದರು.
ವರುಣಾದಲ್ಲಿ ಪ್ರಚಾರದ ವೇಳೆ ಸಂಸದ ಪ್ರತಾಪ್ ಸಿಂಹ ಅವರನ್ನು ಜನ ತರಾಟೆಗೆ ತೆಗೆದುಕೊಂಡ ಬಗ್ಗೆ ಮಾತನಾಡಿ, ಪ್ರತಾಪ್ ಸಿಂಹಗೆ ಮೊನ್ನೆ ವರುಣಾದಲ್ಲಿ ಜನ ಬೆವರಿಳಿಸಿದರು. ಹಿಗ್ಗಾಮುಗ್ಗಾ ಜಾಡಿಸಿದರು. ಭಾರತ್ ಜೋಡೊ ಯಾತ್ರೆಯ ಬಳಿಕ ಕಾಂಗ್ರೆಸ್ ಚೇತರಿಕೆ ಕಾಣುತ್ತಿದೆ. ಕಾಂಗ್ರೆಸ್ ಬಲವಾಗಿ ಇಲ್ಲದ ಕಡೆ ಜೆಡಿಎಸ್‌ನ್ನು ಗೆಲ್ಲಿಸೋಣ. ಬಿಜೆಪಿಯನ್ನು ಸೋಲಿಸೋಣ ಎಂದರು.

ಹಿರಿಯ ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಕರ್ನಾಟಕ ಕಳೆದ ನಾಲ್ಕು ವರ್ಷಗಳಿಂದ ಮತೀಯ ರಾಷ್ಟೀಯವಾದಿ ಪಕ್ಷಗಳಿಂದ ಭಗ್ನವಾಗಿದೆ. ಕನ್ನಡಿಗರು ಕಷ್ಟಪಟ್ಟು ಕಟ್ಟಿದ ಬ್ಯಾಂಕ್‌ಗಳು ಲೂಟಿಯಾಗಿವೆ. ಅಮುಲ್ ವಿಚಾರದಲ್ಲಿಯೂ ಹಿಂದಿ ಹೇರಿಕೆ ಶುರುವಾಗಿದೆ. ತಮಿಳುನಾಡು ಈ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತದೆ. ಆದರೆ ಕರ್ನಾಟಕದಲ್ಲಿ ಇದರ ವಿರುದ್ಧ ಸಿಡಿದೇಳಬೇಕು ಎಂದು ಹೇಳಿದರು.
ರೈತ ಹೋರಾಟಗಾರ ವೀರಸಂಗಯ್ಯ ಮಾತನಾಡಿ, ರೈತ ವಿರೋಧಿ ಪಕ್ಷ ಬಿಜೆಪಿ. ಹೀಗಾಗು ಈ ಬಾರಿ ಬಿಜೆಪಿ ಸರ್ಕಾರವನ್ನು ಸೋಲಿಸಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್ ಭಾಗವಹಿಸಿದ್ದರು.












Click it and Unblock the Notifications