ಸಾಯುತ್ತಿದ್ದೇನೆ ಎಂದರೂ ಯುವಕನ ರಕ್ಷಣೆಗೆ ಯಾರೂ ಬರಲಿಲ್ಲ
ಮೈಸೂರು, ಫೆಬ್ರವರಿ 15: ಮಾರಣಾಂತಿಕ ಹಲ್ಲೆ ನಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕ ಸಾಯುತ್ತಿದ್ದೇನೆ ಎಂದು ನರಳಾಡುತ್ತಿದ್ದರೂ ಯುವಕನ ರಕ್ಷಣೆಗೆ ಮುಂದಾಗದೆ ಆತನನ್ನೇ ಸಾರ್ವಜನಿಕರು ನಿಂದಿಸುತ್ತಾ ನಿಂತ ಘಟನೆ ಮೈಸೂರು ತಾಲೂಕು ಗುಂಗರಾಳ ಛತ್ರ ಗ್ರಾಮದಲ್ಲಿ ನಡೆದಿದೆ. ಕಾಪಾಡಿ ಎಂದು ಬೇಡಿಕೊಳ್ಳುತ್ತಿದ್ದರೂ ಕಾನೂನು ಮಾತಾಡಿಕೊಂಡು ಜನ ನಿಂತಿದ್ದಾರೆ.
ಮೈಸೂರಿನ ದಡದಕಲ್ಲಹಳ್ಳಿ ಗ್ರಾಮದಲ್ಲಿ ಯುವಕರ ನಡುವೆ ಮಾರಾಮಾರಿ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಹಲವರಿಗೆ ಗಾಯಗಳಾಗಿವೆ. ಅಲ್ಲಿಂದ ಅಟ್ಟಿಸಿಕೊಂಡು ಬಂದು ಯುವಕನನ್ನು ಮಾರಣಾಂತಿಕವಾಗಿ ಗುಂಪು ಥಳಿಸಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಯುವಕ ನರಳಾಡಿದ್ದಾನೆ.
ಯುವಕ ನರಳಾಡುತ್ತಿದ್ದರೂ ಆತನನ್ನು ಪ್ರಶ್ನೆ ಮಾಡುತ್ತಲೇ ಕಾಲ ಕಳೆದಿದ್ದಾರೆ ಸಾರ್ವಜನಿಕರು. ನಿನ್ನನ್ನು ಜಗಳ ಮಾಡು ಎಂದು ಹೇಳಿದ್ದು ಯಾರು? ನಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ತರಲು ನೀನೇ ಕಾರಣ ಎಂದು ನಿಂದಿಸಿದ್ದಾರೆ. ಆಂಬುಲೆನ್ಸ್ ಗೆ ಫೋನ್ ಮಾಡದೆ ಹಾಗೇ ಸುಮ್ಮನಿದ್ದಾರೆ. "ನಾನು ಸಾಯುತ್ತಿದ್ದೇನೆ, ಕಾಪಾಡಿ ಎಂದು ಬೇಡಿಕೊಂಡರೂ ಕರುಣೆ ತೋರಿಸಲಿಲ್ಲ ಜನ" ಎಂದು ಯುವಕ ಹೇಳಿಕೊಂಡಿದ್ದಾನೆ.

ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.












Click it and Unblock the Notifications