ಬನ್ನಿ.. ಬಿರು ಬೇಸಿಗೆಯಲ್ಲಿ ನೀರುಣಿಸಿ ಪ್ರಾಣಿ ಪಕ್ಷಿಗಳ ದಾಹ ತಣಿಸೋಣ
ಮೈಸೂರು, ಮಾರ್ಚ್ 10: ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೀಗಾಗಿ ಬಿಸಿಲಲ್ಲಿ ಸ್ವಲ್ಪ ಅಡ್ಡಾಡಿದರೂ ದಾಹವಾಗಿ ನೀರು ಕುಡಿಯೋಣ ಎನಿಸುತ್ತದೆ. ಮನುಷ್ಯರಾದ ನಮಗೆ ಈ ರೀತಿಯಾದರೆ ಮೂಕ ಪ್ರಾಣಿಗಳ ಕಥೆಯೇನು? ಇಂತಹದೊಂದು ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡದಿರದು. ಹೀಗಾಗಿಯೇ ಮಾನವೀಯತೆ ಮೆರೆಯುತ್ತಿರುವ ಬಹುತೇಕರು ತಮ್ಮ ಮನೆ, ಅಂಗಡಿಗಳ ಮುಂದೆ ನೀರಿನ ತೊಟ್ಟಿ, ಮರದಲ್ಲಿ ನೀರಿನ ಬಾಟಲಿಗಳನ್ನು ಕಟ್ಟಿ ಮೂಕಪ್ರಾಣಿ ಮತ್ತು ಪಕ್ಷಿಗಳ ದಾಹ ತೀರಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಜೊತೆ ನಾವು ಕೈಜೋಡಿಸೋಣ.
ಈ ಸಮಯದಲ್ಲಿ ಯಾವುದೇ ಪೇಟೆ, ಪಟ್ಟಣ, ನಗರ ಪ್ರದೇಶಗಳಿರಲಿ ಎಲ್ಲರೂ ಮೂಕ ಪ್ರಾಣಿಗಳ ದಾಹ ತಣಿಸುವ ಕೆಲಸ ಮಾಡಲೇ ಬೇಕಾಗಿದೆ. ಇದನ್ನು ಕರ್ತವ್ಯ ಎಂಬಂತೆ ಪಾಲನೆ ಮಾಡಿದ್ದೇ ಆದರೆ ಜೀವ ಉಳಿಸಿಕೊಂಡು ನಮ್ಮೊಡನೆ ಬದುಕಲು ಅವುಗಳಿಗೆ ಸಾಧ್ಯವಾಗಲಿದೆ. ಈಗಾಗಲೇ ಸಂಘ ಸಂಸ್ಥೆಗಳು ಮೂಕಪ್ರಾಣಿಗಳಿಗೆ ನೀರುಣಿಸುವ ಕೆಲಸವನ್ನು ಆರಂಭಿಸಿದ್ದರೆ ಮತ್ತೆ ಕೆಲವರು ತಮ್ಮ ವರ್ಷಪೂರ್ತಿ ಇಂತಹದೊಂದು ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ತಮ್ಮ ಮನೆಯ ಮುಂದೆ ತೊಟ್ಟಿಯಿಟ್ಟು ಅದಕ್ಕೆ ನೀರು ಹಾಕುವುದರ ಮೂಲಕ ಬೀದಿ ನಾಯಿ ಮತ್ತು ಬಿಡಾಡಿ ದನಗಳ ದಾಹತಣಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇನ್ನು ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಮೂಕ ಪ್ರಾಣಿಗಳ ದಾಹ ನೀಗಿಸಲು ಶ್ರಮಿಸುತ್ತಿರುವ ಆಧುನಿಕ ಭಗೀರಥರು ಬೇಕಾದಷ್ಟು ಮಂದಿ ಸಿಗುತ್ತಾರೆ. ಇವರು ಇವತ್ತು ನಿನ್ನೆಯಿಂದ ಈ ಕೆಲಸವನ್ನು ಮಾಡುತ್ತಿಲ್ಲ ಅವರು ಮೊದಲಿನಿಂದಲೂ ಕಾಯಕವೆಂಬಂತೆ ಮಾಡಿಕೊಂಡು ಬರುತ್ತಿದ್ದಾರೆ. ಇದರ ಬಗ್ಗೆ ಅರಿತಿರುವ ಕೆಲವು ಬೀಡಾಡಿ ದನಗಳು ಮತ್ತು ಬೀದಿನಾಯಿಗಳು ಇಲ್ಲಿಗೆ ಬಂದು ನೀರು ಕುಡಿದು ಹೋಗುತ್ತವೆ. ದಿನನಿತ್ಯವೂ ನೀರು ಕುಡಿದು ಅಭ್ಯಾಸವಾಗಿರುವುದರಿಂದ ಇಂತಹದ್ದೇ ಸ್ಥಳದಲ್ಲಿ ನೀರು ಸಿಗುತ್ತದೆ ಎಂಬುದನ್ನು ತಿಳಿದಿರುವ ಪ್ರಾಣಿಗಳು ತಪ್ಪದೆ ಬರುವುದನ್ನು ಕಾಣಬಹುದಾಗಿದೆ.
ನಿಜವಾಗಿಯೂ ಇವರೆಲ್ಲರು ಆಧುನಿಕ ಭಗೀರಥರು
ನೀರನ್ನು ಹಣಕೊಟ್ಟು ಕುಡಿಯಬೇಕಾದ ಕಾಲದಲ್ಲಿ ಪ್ರಾಣಿಗಳಿಗಾಗಿಯೇ ಪ್ರತ್ಯೇಕ ನೀರಿನ ತೊಟ್ಟಿ ಕಟ್ಟಿಸಿ ಅಥವಾ ತಂದಿರಿಸಿ ಅದರಲ್ಲಿ ನೀರು ಸಂಗ್ರಹವಾಗಿರುವಂತೆ ನೋಡಿಕೊಂಡು ಮೂಕ ಪ್ರಾಣಿಗಳ ದಾಹ ತಣಿಸುವುದು ಸುಲಭದ ಕೆಲಸವಲ್ಲ. ಹಾಗೆಯೇ ಒಂದು ದಿನ ಮಾಡಿ ತೆಪ್ಪಗಾಗುವ ಕೆಲಸವೂ ಅಲ್ಲ. ಆದರೆ ಇಂತಹ ಕಾರ್ಯವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿರುವ ಹಲವು ಪುಣ್ಯಾತ್ಮರು ಮೈಸೂರಿನಲ್ಲಿದ್ದಾರೆ ಎನ್ನುವುದೇ ನಾವೆಲ್ಲರೂ ಖುಷಿ ಪಡುವ ಸಂಗತಿಯಾಗಿದೆ. ಯಾವುದೇ ಪ್ರಚಾರ ಬಯಸದೆ ಅದನ್ನು ನಮ್ಮ ಕರ್ತವ್ಯ ಎಂದು ನಂಬಿರುವುದರಿಂದಲೇ ಚಾಚೂ ತಪ್ಪದೆ ಮಾಡಲು ಸಾಧ್ಯವಾಗಿದೆ.

ನಗರದ ಯಾವುದೇ ಬೀದಿಯಿರಲಿ ಇಲ್ಲಿ ನೀರಿನ ತೊಟ್ಟಿಗಳು ಕಾಣಸಿಗುತ್ತವೆ ಮತ್ತು ಅಲ್ಲಿ ಪ್ರಾಣಿಗಳು ನೀರು ಕುಡಿದು ಮುಂದೆ ಸಾಗುವುದು ಕಂಡು ಬರುತ್ತದೆ. ಇನ್ನು ಇವರ ನಡುವೆ ಕೆಲವರು ಬೆಳಿಗ್ಗೆ ಅಥವಾ ಸಂಜೆ ಬೀದಿನಾಯಿಗಳಿಗೆ ಬಿಸ್ಕೆಟ್ ಹಾಕುವುದು, ದನಗಳಿಗೆ ಹುಲ್ಲು ಹಾಕುವುದು, ಕಾಗೆ, ಪಾರಿವಾಳ ಸೇರಿದಂತೆ ಪಕ್ಷಿಗಳಿಗೆ ಕಾಳು ಹಾಕುವವರು ಬಹಳಷ್ಟು ಜನರಿದ್ದಾರೆ. ನಗರದ ಕೆಲವೆಡೆ ಅಲೆಮಾರಿಗಳಿದ್ದು, ಇವರು ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೂ ಆಹಾರ ತಂದು ಕೊಟ್ಟು ತಮ್ಮ ಪಾಡಿಗೆ ಹೋಗುವ ಅನ್ನದಾತರೂ ಇದ್ದಾರೆ. ಇವರಾರು ಪ್ರಚಾರ ಬಯಸುವುದಿಲ್ಲ. ಯಾರಿಗೂ ಗೊತ್ತೇ ಆಗದಂತೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಏನಾದರೂ ಒಳ್ಳೆಯದು ಮಾಡಬೇಕೆಂದರೆ ಹೀಗೂ ಮಾಡಬಹುದು ಎಂಬುದನ್ನು ಇವರಿಂದ ನೋಡಿ ಕಲಿಯಬಹುದಾಗಿದೆ.
ಮನೆಯ ತಾರಸಿ ಮೇಲೆ ನೀರಿಡೋಣ
ನಾಳೆಗಿರಲಿ ಎಂದು ಕೂಡಿಡುವ ಮತ್ತು ಮಕ್ಕಳು, ಮೊಮ್ಮಕ್ಕಳಿಗಾಗಿ ಆಸ್ತಿ ಮಾಡಿಡುವ, ಎಲ್ಲವೂ ನಮಗೆ ಬೇಕೆಂದು ಬಯಸುವ ಸ್ವಾರ್ಥಿಗಳ ನಡುವೆ ನಿಸ್ವಾರ್ಥದಿಂದ ತಮ್ಮ ದುಡಿಮೆಯಲ್ಲಿ ಒಂದಷ್ಟನ್ನು ಮೂಕ ಪ್ರಾಣಿಗಳು ಮತ್ತು ನಿರ್ಗತಿಕರಿಗಾಗಿ ಖರ್ಚು ಮಾಡುವ ಮಂದಿ ನಮ್ಮ ನಡುವೆ ಇದ್ದಾರೆ ಎನ್ನುವುದೇ ನಾವೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ. ಅದು ಏನೇ ಇರಲಿ ಈಗ ರಣಬಿಸಿಲಿನ ಕಾಲವಾಗಿರುವುದರಿಂದ ಪಕ್ಷಿಗಳು ಕೂಡ ನೀರಿಗಾಗಿ ಹಾತೊರೆಯುತ್ತವೆ. ಹೀಗಾಗಿ ಅವುಗಳಿಗಾಗಿ ನಮ್ಮ ಮನೆಯ ತಾರಸಿ ಮೇಲೆ ಒಂದು ಪುಟ್ಟ ಬಟ್ಟಲಲ್ಲಿ ನೀರಿಟ್ಟರೂ ಸಾಕು ಅವು ನೀರು ಕುಡಿದು ದಾಹತಣಿಸಿಕೊಳ್ಳುತ್ತವೆ.












Click it and Unblock the Notifications