ಮೈಸೂರಿನ ರಸ್ತೆಗಳಲ್ಲಿ ಗುಂಡಿಗಳ ಆಧಿಪತ್ಯ, ಸಿದ್ದು ಆದೇಶಕ್ಕೆ ಕಿಮ್ಮತ್ತಿಲ್ಲ
ಮೈಸೂರು, ಅಕ್ಟೋಬರ್ 10 : ರಸ್ತೆಯ ತುಂಬೆಲ್ಲಾ ಗುಂಡಿಗಳು ಬೆಂಗಳೂರಿನಲ್ಲಿ ಮಾತ್ರವಲ್ಲ, ಮೈಸೂರಿನಲ್ಲೂ ಇವೆ. ನಿತ್ಯವೂ ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮೈಸೂರು ಕೂಡ ಗುಂಡಿಮಯವಾಗಿದೆ. ಇಂತಹ ಗುಂಡಿ ಬಿದ್ದ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ.
ನಗರದ ಇಟ್ಟಿಗೆಗೂಡು, ನಜರಬಾದ್, ಹಾರ್ಡಿಂಗ್ ವೃತ್ತ ಸೇರಿದಂತೆ ಪ್ರವಾಸಿ ಮಾರ್ಗದಲ್ಲೂ ರಸ್ತೆಗಳು ಗುಂಡಿಮಯವಾಗಿವೆ. ದಸರೆ ಅಷ್ಟರಲ್ಲಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದರೂ ಇನ್ನೂ ಅನೇಕ ಕಡೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾತ್ರವಾಗಿಲ್ಲ. ಆಗಲೇ ದಸರಾ ಮುಗಿದೇ ಹೋಯಿತು.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಮಂಗಳವಾರ ಲೋಕರಂಜನ್ ರಸ್ತೆಯಲ್ಲಿನ ಗುಂಡಿಗಳಲ್ಲಿ ಬಾಳೆ ಸಸಿ ನೆಟ್ಟು, ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ನಡೆಸಿದರು. ತಕ್ಷಣವೇ ಈ ಎಲ್ಲಾ ಗುಂಡಿಗಳನ್ನು ಮುಚ್ಚಿಸುವಂತೆ ಮೇಯರ್ ಗೆ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ರಸ್ತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂಬುದು ಸುದ್ದಿಯಾಗಿದೆ. ಆದರೆ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಆದೇಶ ಪಾಲನೆ ಆಗ್ತಿಲ್ಲ ಎಂದು ಆಡಿಕೊಳ್ಳುವಂತಾಗಿದೆ.












Click it and Unblock the Notifications