ಮಾಧ್ಯಮದವರನ್ನು ಹೊರಹಾಕಿ: ಪಿರಿಯಾಪಟ್ಟಣ ಶಾಸಕ ವಿವಾದಾತ್ಮಕ ಹೇಳಿಕೆ
ಮಾಧ್ಯಮಗಳು ಸರ್ವಥಾ ವಿವಾದಗಳನ್ನು ಹುಟ್ಟುಹಾಕುತ್ತವೆಯೇ ಹೊರತು ತಮ್ಮ ಜನಕಲ್ಯಾಣ ಯೋಜನೆಗಳನ್ನು, ವಿಚಾರಗಳನ್ನು ವರದಿ ಮಾಡುವುದಿಲ್ಲವೆಂದು ಕಿಡಿ
ಮೈಸೂರು, ಮಾರ್ಚ್ 6 : ನನ್ನ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನ ಕರೆಯಬೇಡಿ. ಪತ್ರಿಕೆಯಲ್ಲಿ ಫೊಟೋ ಹಾಕಿಸಿಕೊಂಡು ಏನು ಆಗಬೇಗಾಕಿಲ್ಲ? ನಾನು ಮಾಡುವ ಅಭಿವೃದ್ಧಿ ಕಾರ್ಯಗಳು ಜನರಿಗೆ ಗೊತ್ತಾದರೆ ಸಾಕು ಎಂದು ಬಿಡಿಎ ಅಧ್ಯಕ್ಷ ಹಾಗೂ ಪಿರಿಯಾಪಟ್ಟಣ ಶಾಸಕ ಕೆ. ವೆಂಕಟೇಶ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಸುಳ್ಳೆಕೋಟೆ ಗ್ರಾಮದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಯೋಜನೆಯಡಿ ಆರಂಭವಾಗಿರುವ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ನಾನು ಭಾಗವಹಿಸುವ ಕಾರ್ಯಕ್ರಮಗಳಿಗೆ ಪತ್ರಿಕೆಯವರನ್ನ ಕರೆಯ ಬೇಡಿ ಎಂದು ನಮ್ಮ ಪಿ.ಎಗೆ ತಿಳಿಸಿದ್ದೇನೆ. ನಮಗೆ ಪ್ರಚಾರ ಸಾಕು. ಪತ್ರಿಕೆಯಲ್ಲಿ ಫೋಟೋ ಹಾಕಿಸಿಕೊಂಡು ಏನು ಆಗಬೇಕಾಗಿಲ್ಲ ಎಂದು ಕಿಡಿಕಾರಿದರು.

ಅಲ್ಲದೆ, ನಾನು ಮಾಡುವ ಅಭಿವೃದ್ಧಿ ಜನರಿಗೆ ಗೊತ್ತಾದರೆ ಸಾಕು. ಆದರಿಂದ ಪತ್ರಿಕೆಯವರನ್ನ ನನ್ನ ಕಾರ್ಯಕ್ರಮಗಳಿಗೆ ಕರೆಯಬೇಡಿ ಎಂದು ಹೇಳಿದ್ದೇನೆ ಅಂತಾ ಸಾರ್ವಜನಿಕ ಸಭೆಯಲ್ಲೇ ಕುಳಿತಿದ್ದ ಪತ್ರಕರ್ತರನ್ನ ಉದ್ದೇಶಿಸಿ ವೆಂಕಟೇಶ್ ಈ ರೀತಿಯ ಹೇಳಿಕೆ ನೀಡಿದರು. ಈ ಹೇಳಿಕೆಯಿಂದ ಶಾಸಕ ಕೆ.ವೆಂಕಟೇಶ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹಿನ್ನೆಲೆ: ಕಳೆದ ಫೆಬ್ರವರಿ 18 ರಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಕೆ.ವೆಂಕಟೇಶ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಲಸೊಗೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ರಾಜಕಾರಣಿಗಳೆಲ್ಲಾ ಭ್ರಷ್ಟರು ಎಂದು ಹೇಳುತ್ತಾರೆ. ಆದರೆ ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ವೋಟು ಕೇಳಲು ಹೋದರೆ ಜನ ದುಡ್ಡು ಕೇಳುತ್ತಾರೆ. ನಾವು ಎಲ್ಲಿಂದ ತಂದು ಕೊಡೋದು ಎಂಬ ವಿವಾದ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು.
ಬಳಿಕ ಶಾಸಕರು ನಾನು ಆ ರೀತಿ ಹೇಳಿಕೆ ನೀಡಿರಲಿಲ್ಲ. ಮಾಧ್ಯಮದವರು ಅದನ್ನ ತಿರುಚಿ ಪ್ರಸಾರ ಮಾಡಿದರು ಎಂದು ದೂರಿದ್ದರು. ಈಗ ನನ್ನ ಯಾವುದೇ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನ ಕರೆಯ ಬೇಡಿ ಎಂದು ನನ್ನ ಪಿಎಗೆ ಹೇಳಿದ್ದೇನೆ ಅಂತಾ ಇಂದಿನ ಕಾರ್ಯಕ್ರಮದಲ್ಲಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.












Click it and Unblock the Notifications