ಕೊಲೆ ಆರೋಪಿಗೆ ಜಾಮೀನು ಸಿಕ್ಕ ದಿನ, ಸೆಲ್ಫಿಗೆ ಮುಗಿಬಿದ್ದ ಜನ!
ಮೈಸೂರು, ಫೆಬ್ರವರಿ 21 : ಎರಡು ವರುಷಗಳ ಹಿಂದೆ ಇಡೀ ಮೈಸೂರನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿ ಅಬೀಬ್ ಪಾಷಾಗೆ ಎರಡು ದಿನಗಳ ಹಿಂದೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಬಂದ ಆತನಿಗೆ ಹಾರ, ತುರಾಯಿ ಹಾಕಿ ಸನ್ಮಾನ ಮಾಡಲಾಗಿದೆ. ಅಷ್ಟೇ ಅಲ್ಲ, ಅವನ ಜತೆಗೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.
2016ರ ಮಾರ್ಚ್ 13 ರಂದು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜು ಎಂಬ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಅಬೀಬ್ ಪಾಷಾ 5 ತಿಂಗಳು ತಲೆ ಮರೆಸಿಕೊಂಡಿದ್ದವನು ಆ ನಂತರ ಸಿಕ್ಕಿಬಿದ್ದಿದ್ದ. ರಾಜು ಹತ್ಯೆ ಜೊತೆ ಮೂರು ಕೊಲೆ ಪ್ರಕರಣಗಳಲ್ಲಿ ಅಬೀಬ್ ಆರೋಪಿಯಾಗಿದ್ದಾನೆ.
ಎಸ್ ಡಿಪಿಐ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಅಬೀಬ್ ಪಾಷಾ, ರಾಜು ಹತ್ಯೆ ನಡೆಸುವ ಮುನ್ನ ಕೇರಳದ ಸಮುದ್ರ ದಂಡೆಯಲ್ಲಿ ನಾಯಿಗಳನ್ನು ಕೊಲ್ಲುವ ಮೂಲಕ ಕೊಲೆಗೆ ತಯಾರಿ ನಡೆಸಿದ್ದ ಎಂದು ಹೇಳಲಾಗುತ್ತಿದೆ.

ಕಾಶ್ಮೀರದ ಉಗ್ರ ಸಂಘಟನೆಗೆ ಸೇರುವ ಬಯಕೆ ಹೊಂದಿದ್ದ ಅಬೀಬ್, ಮೈಸೂರಿನ ಮೂವರು ಬಿಜೆಪಿ ಮುಖಂಡರು, ಉತ್ತರ ಪ್ರದೇಶದ ಬಿಜೆಪಿ ಮುಖಂಡ ಕಮಲೇಶ್ ತಿವಾರಿ ಅವರನ್ನು ಟಾರ್ಗೆಟ್ ಮಾಡಿದ್ದ ಎಂದು ತಿಳಿದು ಬಂದಿತ್ತು. 2 ಲಕ್ಷ ರುಪಾಯಿ ಭದ್ರತೆ ಹಾಗೂ ಇಬ್ಬರು ಷ್ಯೂರಿಟಿ ಜತೆಗೆ ಮೈಸೂರು ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು.












Click it and Unblock the Notifications