ಕೆ.ಆರ್.ನಗರದಲ್ಲಿ ಬತ್ತಿದ ನೀರಿನ ಸೆಲೆ: ಒಣಗಿದ ಭತ್ತದ ಬೆಳೆ, ರೈತ ಕಂಗಾಲು
ಮೈಸೂರು, ಏಪ್ರಿಲ್ 24: ಇಷ್ಟರಲ್ಲಿಯೇ ಮಳೆ ಸುರಿಯಬೇಕಿತ್ತಾದರೂ ಈ ಬಾರಿ ವರುಣ ಕೃಪೆ ತೋರುವ ಲಕ್ಷಣ ಕಾಣಿಸದ ಹಿನ್ನಲೆಯಲ್ಲಿ ನೀರಿನ ಮೂಲಗಳು ಬತ್ತುತ್ತಿದ್ದು, ಜಿಲ್ಲೆಯ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಬೇಸಿಗೆ ಹಂಗಾಮಿನ ಭತ್ತ ಬೆಳೆಗೆ ನೀರಿಲ್ಲದೆ ರೈತರು ಪರದಾಡುವಂತಾಗಿದೆ.
ಭತ್ತದ ಕಣಜ ಎಂದೇ ಕರೆಯುವ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ಈ ನೀರನ್ನು ಬಳಸಿಕೊಂಡು ರೈತರು ಬೇಸಿಗೆ ಹಂಗಾಮಿನ ಭತ್ತ ಬೆಳೆಯುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಭತ್ತ ಬೆಳೆದ ರೈತರಿಗೆ ನೀರಿನ ಬಿಸಿ ಮುಟ್ಟಿದ್ದು, ಭತ್ತದ ಬೆಳೆ ನೀರಿಲ್ಲದೆ ಒಣಗುವಂತಾಗಿದೆ.

ಕಳೆದ ಕೆಲ ವರ್ಷಗಳಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆಯಾದ ಪರಿಣಾಮ ಮತ್ತು ಬೇಸಿಗೆಯಲ್ಲಿಯೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದ್ದರಿಂದ ಕಾವೇರಿ ನದಿಯಲ್ಲಿ ನೀರು ಹರಿದು ಬರುತ್ತಿತ್ತು. ಹೀಗಾಗಿ ಕಳೆದ ಕೆಲ ವರ್ಷಗಳಿಂದ ರೈತರು ಬೆಳೆದ ಭತ್ತದ ಬೆಳೆಗೆ ನೀರಿನ ತೊಂದರೆ ಕಾಣಿಸಿರಲಿಲ್ಲ.
ನೀರಿಲ್ಲದೆ ಪರದಾಡುತ್ತಿರುವ ರೈತರು
ಆದರೆ ಈ ಬಾರಿ ಕೊಡಗಿನಲ್ಲಿ ಬೇಸಿಗೆಯ ಮಳೆ ಸರಿಯಾಗಿ ಸುರಿದಿಲ್ಲ. ಹೀಗಾಗಿ ಕಾವೇರಿ ತವರಲ್ಲಿಯೇ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ಸಾಲಿಗ್ರಾಮ ವ್ಯಾಪ್ತಿಯ ನೀರಾವರಿ ಪ್ರದೇಶಗಳಲ್ಲಿ ಬೆಳೆದಿರುವ ಭತ್ತ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳಿಗೆ ನೀರುಣಿಸಲು ರೈತರು ಪರದಾಡುವಂತಾಗಿದೆ.

ಈ ಬಾರಿಯ ಬೇಸಿಗೆಯ ತೀವ್ರತೆ ಹೆಚ್ಚಾಗಿದೆ. ಇಷ್ಟರಲ್ಲೇ ಮಳೆ ಸುರಿದಿದ್ದರೆ ಹುಲ್ಲು ಹುಟ್ಟುತ್ತಿತ್ತು. ಇದರಿಂದ ಜಾನುವಾರುಗಳಿಗೆ ಮೇವು ಸಿಗುತ್ತಿತ್ತು. ಆದರೆ ಮಳೆ ಬಾರದ ಕಾರಣ ಇಡೀ ಪರಿಸರ ಒಣಗಿ ನಿಂತಿದೆ. ಇನ್ನೊಂದೆಡೆ ಕಾವೇರಿ ನದಿ ನೀರನ್ನು ನಂಬಿ ಕೆ.ಆರ್.ನಗರ ತಾಲೂಕಿನ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಬೆಳೆದಿದ್ದ ಭತ್ತ ಬೆಳೆ ಒಣಗುವಂತಾಗಿದೆ.
ನೀರು ಹರಿಯದಿದ್ದರೆ ಬೆಳೆ ನಾಶ
ಈಗ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಅಣೆಕಟ್ಟೆಗಳಲ್ಲೂ ನೀರಿಲ್ಲದಂತಾಗಿದೆ. ಒಂದು ವೇಳೆ ಇಷ್ಟರಲ್ಲೇ ಮಳೆ ಸುರಿದಿದ್ದರೆ ಬೆಳೆಗಳನ್ನು ಕಾಪಾಡಿಕೊಳ್ಳಬಹುದಾಗಿತ್ತು. ಆದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ನಾಟಿ ಮಾಡಿದ ಗದ್ದೆಗೆ ನೀರು ಸಾಲದಾಗುತ್ತಿದೆ.ಇದರಿಂದ ಭತ್ತದ ಬೆಳೆ ನಾಶವಾಗುವ ಹಂತ ತಲುಪಿದೆ.
ರೈತರು ಹೇಳುವಂತೆ ಅಣೆಕಟ್ಟೆಗಳ ಮೊದಲ ಹಂತದ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ನಾಲಾ ವ್ಯಾಪ್ತಿಯ ಸಾವಿರಾರು ಎಕರೆಯ ಪ್ರದೇಶಗಳ ಗದ್ದೆಗಳಲ್ಲಿ ಭತ್ತ ನಾಟಿ ಕಾರ್ಯ ಮುಗಿದು ಎರಡು ತಿಂಗಳ ಕಳೆದಿವೆಯಂತೆ. ಈ ಸಮಯದಲ್ಲಿ ಭತ್ತ ಬೆಳೆಗೆ ನೀರಿನ ಅಗತ್ಯವಿದ್ದು, ಆದರೆ ಬೆಳೆಗೆ ಸಮರ್ಪಕವಾಗಿ ನೀರುಣಿಸಲು ಕಷ್ಟವಾಗಿದೆಯಂತೆ. ಪರಿಣಾಮ ಗದ್ದೆಗಳಲ್ಲಿದ್ದ ಭತ್ತದ ಬೆಳೆಗಳು ಬಾಡುತ್ತಿವೆ. ಇನ್ನೊಂದು ವಾರದೊಳಗೆ ಮಳೆ ಅಥವಾ ಕಾಲುವೆಗಳಲ್ಲಿ ನೀರು ಹರಿಯದಿದ್ದರೆ ರೈತರು ಬೆಳೆದ ಭತ್ತದ ಬೆಳೆ ಒಣಗಿಹೋಗುವ ಆತಂಕ ಶುರುವಾಗಿದೆ.

ರೈತರ ಬದುಕು ಮೂರಾಬಟ್ಟೆ
ಬೇಸಿಗೆ ಹಂಗಾಮಿನ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಸುಮಾರು 2580 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಕಬ್ಬು, ಜೋಳ, ರಾಗಿ ಸೇರಿದಂತೆ ಹಲವು ಬಗೆಯ ತರಕಾರಿ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಈ ಬೆಳೆಗಳಿಗೆ ನೀರಿನ ಆಸರೆಯಾಗಿದ್ದ ನದಿ, ಅಣೆಕಟ್ಟೆ, ಕೆರೆ, ತೊರೆ, ಹಳ್ಳ ಕೊಳ್ಳಗಳು ಬಿಸಿಲಿನ ಹೊಡೆತಕ್ಕೆ ಬತ್ತಿಹೋಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ರೈತರ ಬದುಕು ಮೂರಾಬಟ್ಟೆಯಾಗುವುದಂತು ನಿಜ.
ಕೆಲವರು ಬೆಳೆದ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೊಳವೆ ಬಾವಿ ತೆಗೆಯುವ ಪ್ರಯತ್ನಕ್ಕೆ ಕೈಹಾಕಿದ್ದು, ಹಲವೆಡೆ ಕೊಳವೆ ಬಾವಿ ತೋಡುವ ಕಾರ್ಯಗಳು ನಡೆಯುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಕೊಳವೆ ಬಾವಿ ತೋಡಿ ಅದರಿಂದ ನೀರು ತೆಗೆದು ಬೆಳೆಗೆ ಹಾಕುವುದು ಅನಿವಾರ್ಯವಾಗಿದೆ. ಇಲ್ಲದೆ ಹೋದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಲಿದೆ.
ಕೃಪೆ ತೋರುತ್ತಾನಾ ವರುಣ?
ಒಂದೆಡೆ ಬೆಳೆದ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಕೂಡ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಹೀಗಾಗಿ ರೈತರು ಆಕಾಶದತ್ತ ಮುಖ ಮಾಡಿ ಮಳೆಗಾಗಿ ಪ್ರಾರ್ಥಿಸುವಂತಾಗಿದೆ. ವರುಣ ಕೃಪೆ ತೋರುತ್ತಾನಾ? ಕಾದು ನೋಡಬೇಕಿದೆ.












Click it and Unblock the Notifications