ಪ್ರವಾಸಿಗರ ಮೇಲೆ ಯಾವುದೇ ನಿರ್ಬಂಧವಿಲ್ಲ; ಮೈಸೂರು ಡಿಸಿ
ಮೈಸೂರು, ನವೆಂಬರ್ 2: ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವನ್ನು ಹೇರಲಾಗಿಲ್ಲ. ಕೋವಿಡ್ ಅನ್ ಲಾಕ್ 5 ಮಾರ್ಗಸೂಚಿಯಂತೆ ಒಂದು ಪ್ರದೇಶದಲ್ಲಿ ಲಾಕ್ ಡೌನ್ ಮಾಡಲು ಅಥವಾ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಆದ್ದರಿಂದ ಮೈಸೂರಿಗೆ ಬರುವ ಪ್ರವಾಸಿಗರ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಸಾವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ಆದರೆ ಇನ್ನಷ್ಟು ದಿನ ಎಚ್ಚರಿಕೆಯಿಂದ ಇರುವುದು ಅತಿ ಅವಶ್ಯವಾಗಿದೆ ಎಂದರು.
ಮೈಸೂರಿಗೆ ಬರುವ ಪ್ರವಾಸಿಗರು ಮೃಗಾಲಯ, ಚಾಮುಂಡಿ ಬೆಟ್ಟ, ಅರಮನೆ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡುತ್ತಾರೆ. ಅವರನ್ನು ಎಲ್ಲಾದರೂ ಒಂದು ಜಾಗದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು ಜಿಲ್ಲಾಡಳಿತದ ಉದ್ದೇಶ. ಹೀಗಾಗಿಯೇ ಅರಮನೆಯ ಪ್ರವೇಶಕ್ಕೆ ಮುನ್ನ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದುವರೆಗೂ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯ ಕೊರೊನಾ ಪ್ರಕರಣಗಳು: ಜಿಲ್ಲೆಯಲ್ಲಿ ನ.1ರ ವರದಿಯಂತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 47,831 ಕ್ಕೆ ಏರಿಕೆಯಾಗಿದೆ. ಇದುವರೆಗೂ 45,290 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ 1,582 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 959 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.











Click it and Unblock the Notifications