ಯಾರ ಮೇಲೆ ಯಾರೂ ದೂರು ಕೊಟ್ಟಿಲ್ಲ; ಜಿ.ಟಿ.ದೇವೇಗೌಡ
ಮೈಸೂರು, ಜೂನ್ 20: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ದೂರು ನೀಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನಿರಾಧಾರ ಎಂದು ಮೈಸೂರಿನಲ್ಲಿ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ಮೈತ್ರಿ ಪಕ್ಷದಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದಾರೆ. ಹೈಕಮಾಂಡ್ ಗೆ ಯಾವುದೇ ದೂರನ್ನು ನೀಡಿಲ್ಲ ಎಂದು ಅವರು ಹೇಳಿದರು.
ಸರ್ಕಾರ ನಡೆಸೋದಕ್ಕೆ ಅವಕಾಶ ಕೊಡಿ. ಎಲ್ಲಾ ರೀತಿ ತೊಡಕುಗಳನ್ನು ನಿವಾರಿಸಲು ಸಹಕಾರ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತಾಡಿದ್ದೇವೆ. ಕಾಂಗ್ರೆಸ್ ಗೆ ಅಭದ್ರತೆ ಸೃಷ್ಟಿಸುವ ಅವಶ್ಯಕತೆ ಇಲ್ಲಿ ಇಲ್ಲ. ಪ್ರೀತಿ ವಿಶ್ವಾಸದಿಂದ ಇರೋದು ನಮ್ಮ ಮುಂದಿನ ಗುರಿಯಷ್ಟೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಭೇಟಿ ವಿಚಾರವನ್ನು ಪ್ರಸ್ತಾಪಿಸಿ, ಚುನಾವಣೆಯ ಅವಲೋಕನೆಗೆ ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದರು. ಸೋಲಿನ ವರದಿ ಕೊಡುವುದಕ್ಕೆ ಭೇಟಿ ಕೊಟ್ಟಿದ್ದಾರೆ ಅಷ್ಟೆ. ಯಾವುದೇ ದೂರು ಕೊಟ್ಟಿಲ್ಲ ಎಂದರು ಜಿ.ಟಿ. ದೇವೇಗೌಡ.












Click it and Unblock the Notifications