ಹಿಜಾಬ್ ಮತ್ತು ಶಿವಮೊಗ್ಗದ ಪ್ರಕರಣಕ್ಕೆ ಸಂಬಂಧ ಇಲ್ಲ: ಎಚ್‌ಡಿಕೆ
ಮೈಸೂರು, ಫೆಬ್ರವರಿ 23; "ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಹಿಜಾಬ್ ಗಲಾಟೆಗೂ ಶಿವಮೊಗ್ಗದ ಪ್ರಕರಣಕ್ಕೂ ಸಂಬಂಧ ಇಲ್ಲ. 200 ಪರ್‌ಸೆಂಟ್ ಹೇಳುವೆ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, "ಮುಂದಿನ ಚುನಾವಣೆವರೆಗೂ ಇಂಥ ಗಲಾಟೆ ನಡೆಯುತ್ತಿರುತ್ತವೆ. ಕೋಮು ಸೌಹಾರ್ದತೆ ವಿಚಾರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮಕ್ಕಳ ಸಾಯಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಕೋವಿಡ್ ಬಂದಿದೆ" ಎಂದು ಕುಟುಕಿದರು.
"ಕಾಂಗ್ರೆಸ್ ನಾಯಕರು ಸದನದಲ್ಲಿ ನಡೆದುಕೊಳ್ಳುವ ರೀತಿ ಸರಿ ಇಲ್ಲ. ಜಾತ್ಯಾತೀತ ಜನತದಳದಿಂದ ಸದನಕ್ಕೆ ಅಡ್ಡಿಪಡಿಸಿದ ಉದಾಹರಣೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಹಲವಾರು ಹತ್ಯೆ ಪ್ರಕರಣ ಇದ್ದವು. ಆಗ ವಿರೋಧ ಪಕ್ಷವಾಗಿದ್ದಾಗ ನಾವೂ ಹೋರಾಟ ಮಾಡಿದ್ದೇವೆ. ಆದರೀಗ ಸದನದ ಕಲಾಪಗಳಿಗೆ ಅಡ್ಡಿ ಪಡಿಸಿದ್ದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಅಧಿವೇಶನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಯ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಲ್ಲಪ್ಪ, ಗಣಪತಿ ಸಾವು ಸೇರಿದಂತೆ ಹಲವಾರು ಪ್ರಕರಣ ಬಂದವು. ಆದರೂ ನಾವು ಕಲಾಪ ನಡೆಯಲು ಸಹಕರಿಸಿದೆವು. ಇತಿಹಾಸ ಇರುವ ಕಾಂಗ್ರೆಸ್ ಅಂತಾರೆ. ಹೋರಾಟ ಮಾಡಿದ ಹಿಂದಿನ ಕಾಂಗ್ರೆಸ್ ನಾಯಕರು ಬೇರೆ. ಈಗಿರುವ ಕಾಂಗ್ರೆಸ್ ನಾಯಕರೇ ಬೇರೆ. ಇವರಿಗೆ ವಿಶೇಷವಾದ ಬಹುಮಾನ ಇದ್ದರೆ ಕೊಟ್ಟು ಬಿಡಿ" ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಅಹೋರಾತ್ರಿ ಧರಣಿ ಮಾಡಿದ್ದಾರೆ
"ಬಾವುಟ ತಂದವರು ಇವರೇ ಅಂತೆ, ಮಾತಾಡೋ ಸ್ವಾತಂತ್ರ್ಯ ಕೊಟ್ಟವರು ಇವರೇ ಅಂತೆ. ಕಾಂಗ್ರೆಸ್‌ನಾ ಈ ಹೋರಾಟಕ್ಕೆ ಸ್ಪೀಕರ್ ಯಾವುದಾದರೂ ಅವಾರ್ಡ್ ಇದ್ದರೆ ಕೊಡಲಿ. ಈಶ್ವರಪ್ಪ ವಿರುದ್ದ ಸಾಕ್ಷಿ, ದಾಖಲೆ ಇಟ್ಟು ಅವರ ರಾಜೀನಾಮೆ ಕೇಳಬೇಕಿತ್ತು. ಇವರ ಬಳಿ ದಾಖಲೆ, ಸಾಕ್ಷಿ ಯಾವುದು ಇರಲಿಲ್ಲ. ಬಾಲಿಶವಾದ ರೀತಿ ವಿಷಯ ಇಟ್ಟು ಕೊಂಡು ಅಹೋರಾತ್ರಿ ಧರಣಿ ಮಾಡಿದ್ದಾರೆ" ಎಂದು ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುಬ್ಬರಾಯನ ಕಟ್ಟೆ ಮೇಲೆ ಭಾಷಣ
"ಜನ ಇದನ್ನು ಒಪ್ಪಲ್ಲ. ಕಾಂಗ್ರೆಸ್ ನಡವಳಿಕೆ ಬಗ್ಗೆ ಅನುಮಾನವಿದೆ. ನೀವು ಹೊಡೆದಂಗೆ ಮಾಡಿ ನಾವು ಅತ್ತಂಗೆ ಮಾಡುತ್ತೀವಿ ಎಂದು ಬಿಜೆಪಿ, ಕಾಂಗ್ರೆಸ್ ನಡುವೆ ಒಪ್ಪಂದ ನಡೆದಿರಬಹುದು. ಸುಬ್ಬರಾಯನ ಕಟ್ಟೆ ಮೇಲೆ ಭಾಷಣ ಮಾಡಿದಂಗೆ ನಾಲ್ಕು ನಾಲ್ಕು ಗಂಟೆ ವಿರೋಧ ಪಕ್ಷದ ನಾಯಕರು ಮಾತಾಡುತ್ತಾರೆ. ನಾನು ಆಡಳಿತ ಪಕ್ಷದ ವಿರೋಧ ಮಾತಾಡಲು ತಯಾರಿ ಮಾಡಿದ್ದೆ. ಅದಕ್ಕೆ ಅವಕಾಶವೇ ಸಿಗಲಿಲ್ಲ" ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಮೇಕೆದಾಟು 2ನೇ ಹಂತದ ಪಾದಯಾತ್ರೆ
"ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ?. ನೀವೆ ಮಣ್ಣಿನ ಮಕ್ಕಳೆಂದು ಬೋರ್ಡ್ ಹಾಕೊಂಡು ಹೋಗಿ. ನಾವೆಂದು ಮಣ್ಣಿನ ಮಕ್ಕಳು ಅಂತ ಹೇಳಿಕೊಂಡಿಲ್ಲ. ನಿಮಗೆ ಕಲ್ಲಿನ ಮಕ್ಕಳು ಅಂತ ಕರೆಯುತ್ತಾರೆ. ಈಗೇನೋ ಮಣ್ಣಿನ ಮಕ್ಕಳು ಅಂತ ಬಿಂಬಿಸಿಕೊಳ್ಳಲು ಹೋಗುತ್ತಿದ್ದೀರಿ. ಬೋರ್ಡ್ ಹಾಕಿಕೊಳ್ಳಿ" ಎಂದು ಡಿಕೆಶಿ ಸಹೋದರರಿಗೆ ಟಾಂಗ್ ಕೊಟ್ಟರು.

ಡಿಕೆಶಿ ಕುತ್ತಿಗೆಗೆ ಬರುತ್ತದೆ
"ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದರೆ ಡಿಕೆಶಿ ಕುತ್ತಿಗೆಗೆ ಬರುತ್ತದೆ. ದೇವೆಗೌಡರು ಬದುಕಿರೋವರೆಗೂ ಈ ಸಮಾಜ ಅವರನ್ನು ಕೈ ಬಿಡಲ್ಲ. ಡಿಕೆಶಿ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ. ಇನ್ಯಾರನ್ನಾದರೂ ಸೆಳೆಯಲಿ ನಾವು ತಲೆಕೆಡಿಸಿಕೊಳ್ಳಲ್ಲ. ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ. ಈ ಸಂಬಂಧ ನಾನು ಯಾವುದೇ ರಿವರ್ಸ್ ಆಪರೇಷನ್ ಮಾಡಲ್ಲ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಬೆಳವಣಿಗೆ ನೋಡಿ ಆ ಪಕ್ಷದವರೇ ಬರ್ತಾರೆ" ಎಂದು ಭವಿಷ್ಯ ನುಡಿದರು.












Click it and Unblock the Notifications