ಗೋಲ್ಡ್ ಕಾರ್ಡ್, ಪಾಸ್ ಇದ್ರೂ ನೂಕು ನುಗ್ಗಲು: ದಸರಾ ಆಯೋಜಕರು ಓದಲೇಬೇಕಾದ ಸುದ್ದಿ
ಮೈಸೂರು, ಅಕ್ಟೋಬರ್ 25: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಗೋಲ್ಡ್ ಕಾರ್ಡ್ ತೆಗೆದುಕೊಂಡರೂ ಸಹ ಮೆರವಣಿಗೆ ನೋಡಲಾಗದೇ ನೂಕು ನುಗ್ಗಲು ಉಂಟಾಗುತ್ತದೆ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಹಾಗೂ ದಸರಾ ವೇಳೆ ನಡೆಯುವ ಹಲವು ನ್ಯೂನತೆಗಳನ್ನು ಸರಿ ಪಡಿಸುವಂತೆ ಕೋರಿ ಮಾಜಿ ಮೇಯರ್ ಸಂದೇಶ್ ಸ್ವಾಮಿ ಸುಧೀರ್ಘ ಪತ್ರ ಬರೆದಿದ್ದಾರೆ.
ಮೈಸೂರು ದಸರಾ, ವಿಶ್ವವಿಖ್ಯಾತ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಪಾರಂಪರಿಕ ಹಾಗೂ ಐತಿಹಾಸಿಕ ದಸರಾ, ತಾಯಿ ಚಾಮುಂಡೇಶ್ವರಿ ಕೃಪೆಯಿಂದ ವೈಭವೋಪೇತವಾಗಿ ನಡೆದುಕೊಂಡು ಬಂದಿದೆ. ಈ ಬಾರಿ ದಾಖಲೆ ಸಂಖ್ಯೆಯ ಜನ ದಸರಾದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಹೌದು, ಹೆಚ್ಚು ಸಂಖ್ಯೆಯ ಜನ ಈ ಬಾರಿ ದಸರಾ ಕಣ್ತುಂಬಿಕೊಂಡಿದ್ದಾರೆ. ಆದರೆ ಹಲವು ನ್ಯೂನತೆಗಳು, ವೈಫಲ್ಯಗಳಿಂದಾಗಿ ಜನರ ದಸರಾವಾಗಲು ಸಾಧ್ಯವಾಗಿಲ್ಲ.

ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 40-50 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಆರೂವರೆ ಸಾವಿರ ಪಾವತಿಸಿ ಗೋಲ್ಡ್ ಕಾರ್ಡ್ ಪಡೆದವರು, ಭಾರೀ ದರದ ಟಿಕೆಟ್ ಕೊಂಡವರು, ಉಚಿತ ಪಾಸ್ ಗಳು ದಕ್ಕಿದವರಷ್ಟೇ ಅರಮನೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಈ ವ್ಯವಸ್ಥೆಯಲ್ಲಿನ ಗೊಂದಲಗಳಿಗಂತೂ ಇನ್ನೂ ಪರಿಹಾರ ಸಿಕ್ಕಿಲ್ಲ. ಟಿಕೆಟ್, ಗೋಲ್ಡ್ ಕಾರ್ಡ್, ಪಾಸ್ ಇದ್ದವರಿಗೂ ಆಸನ ಸಿಗುವುದಿಲ್ಲ. ಸ್ಥಳಾವಕಾಶಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪಾಸ್ ವಿತರಣೆ ಆಗಿರುತ್ತದೆ. ಇಂತಹ ಹತ್ತಾರು ದೂರುಗಳು ಪ್ರತಿವರ್ಷ ಕೇಳಿ ಬರುತ್ತವೆ.
ಇನ್ನು ಸಾಮಾನ್ಯರಿಗೆ ಅರಮನೆ ಆವರಣದಲ್ಲಿ ದಸರಾ ನೋಡುವುದು ಕಷ್ಟ. ಮೆರವಣಿಗೆ ಸಾಗುವ ಮಾರ್ಗದಲ್ಲಾದರೂ ಕುಳಿತು ನೆಮ್ಮದಿಯಿಂದ ಜಂಬೂಸವಾರಿ ನೋಡಲಾಗದು. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷಚೇತನರು ನೂಕುನುಗ್ಗಲಲ್ಲಿ ಬೆಳಗ್ಗೆಯಿಂದ ಕಾದು ನಿಲ್ಲುತ್ತಾರೆ. ನೀರಿಲ್ಲದೇ, ಶೌಚಾಲಯಕ್ಕೂ ಹೋಗಲಾಗದೆ ಜಂಬೂಸವಾರಿ ಸಾಗುವವರೆಗೂ ನಿಂತಲ್ಲೇ ನಿಂತಿರುತ್ತಾರೆ.

ಅಂಬಾರಿ ಆನೆ ಹತ್ತಿರ ಬರುತ್ತಿದ್ದಂತೆ ನೂಕುನುಗ್ಗಲು ಹೆಚ್ಚಾಗುತ್ತದೆ. ಒಬ್ಬರ ಮೇಲೊಬ್ಬರು ಬೀಳುತ್ತಾರೆ. ಇದರಿಂದ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಜನದಟ್ಟಣೆಯಲ್ಲಿ ಸಿಲುಕಿ ಮಕ್ಕಳು ನರಳುತ್ತಾರೆ. ಕಳ್ಳತನ, ಜಗಳ, ಹೊಡೆದಾಟಗಳಾಗುತ್ತವೆ. ಆ ವೇಳೆ ರಸ್ತೆ ಭಾಗದಲ್ಲಿರುವ ಪೊಲೀಸರೂ ಅಸಹಾಯಕರಾಗಿರುತ್ತಾರೆ.
ನಮ್ಮ ನಾಡಹಬ್ಬ, ಪಾರಂಪರಿಕ ದಸರಾ ಮಹಾ ಉತ್ಸವದ ವೈಭವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಜನರಿಗೆ ಅಹಿತವಾಗುವ ವೈಫಲ್ಯಗಳನ್ನು ಸರಿಪಡಿಸಿಕೊಂಡು ಒಂದಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಜನರಾ ದಸರಾ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿ, ಈಗಿನಿಂದಲೇ ಪರಿಹಾರ ಕ್ರಮಗಳಿಗೆ ಮುಂದಾಗಬೇಕು.
ಜಿಲ್ಲಾಸಚಿವರು, ಜಿಲ್ಲಾಧಿಕಾರಿಗಳು, ಜಿಪಂ, ಮುಡಾ, ಪಾಲಿಕೆ, ಪೊಲೀಸ್ ಸೇರಿದಂತೆ ದಸರಾದಲ್ಲಿ ಜವಾಬ್ದಾರಿ ನಿರ್ವಹಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಮಿಟಿ ರಚಿಸಿಕೊಂಡು ಈ ದಿನದಿಂದಲೇ ಸಿದ್ಧತೆ ನಡೆಸಬೇಕು. ದಸರಾವನ್ನು ಇನ್ನೂ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಎಲ್ಲರೂ ಮೆಚ್ಚುವ ರೀತಿಯಲ್ಲಿ ಆಚರಿಸುವಂತಾಗಬೇಕು ಎಂಬುದು ನನ್ನ ಆಶಯ.
ಜನತೆ ಪರವಾಗಿ ಕೆಲವು ಸಲಹೆಗಳು
ಪುರಭವನ ಆವರಣ ಮಾದರಿಯಲ್ಲಿ ಕೆ.ಆರ್.ಆಸ್ಪತ್ರೆ ಆವರಣದಲ್ಲೂ ಹಲವು ಹಂತಗಳ ಆಸನ ವ್ಯವಸ್ಥೆ ಮಾಡಿ, ಹಿರಿಯನಾಗರಿಕರು, ಮಹಿಳೆಯರು, ಮಕ್ಕಳಿಗೆ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು.
ಚಾಮರಾಜ ಒಡೆಯರ್ ವೃತ್ತದಿಂದ ಬನ್ನಿಮಂಟಪದವರೆಗೂ ಫುಟ್ ಪಾತ್ ನಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವ್ಯವಸ್ಥಿತವಾಗಿ ಆಸನ ವ್ಯವಸ್ಥೆ ಮಾಡಬಹುದು. ಮಹಿಳೆಯರು-ಮಕ್ಕಳು, ಹಿರಿಯರು, ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಗ್ಯಾಲರಿಯನ್ನೂ ಕಾಯ್ದಿರಿಸಬಹುದು. ಇದರಿಂದ ನೂಕುನುಗ್ಗಲು ಇಲ್ಲದಂತೆ 10 ಲಕ್ಷಕ್ಕೂ ಹೆಚ್ಚು ಜನ ಸುರಕ್ಷಿತವಾಗಿ ನೆಮ್ಮದಿಯಿಂದ ದಸರಾ ವೀಕ್ಷಣೆ ಮಾಡಬಹುದು.
ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಹಾಗೂ ಸಂಚಾರ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಈಗ ರಕ್ತದೊತ್ತಡ, ಮಧುಮೇಹ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಹಾಗಾಗಿ ಅಲ್ಲಲ್ಲಿ ವೈದ್ಯರು, ಶುಶ್ರೂಷಕರನ್ನು ನಿಯೋಜಿಸಿ, ಅಗತ್ಯ ಔಷಧಿಗಳನ್ನು ಪೂರೈಸಬೇಕು.
ಪೊಲೀಸರು ಜಂಬೂಸವಾರಿ ಮೆರವಣಿಗೆ ಸಾಗುವ ರಸ್ತೆಯಲ್ಲಿ ನಿಂತು ಬ್ಯಾರಿಕೇಡ್ ನೊಳಗೆ ಜನ ಒಳನುಸುಳದಂತೆ ತಡೆಯುತ್ತಾರೆ. ವ್ಯವಸ್ಥಿತವಾಗಿ ಗ್ಯಾಲರಿಗಳನ್ನು ನಿರ್ಮಿಸಿ, ಗೋಜಲು ಆಗದಂತೆ ಜನರನ್ನು ಕೂರಿಸುವಂತಾದರೆ ಪೊಲೀಸರ ಕಾರ್ಯ ನಿರ್ವಹಣೆಗೂ ಸಹಕಾರವಾಗುತ್ತದೆ.
ವಿಜಯದಶಮಿಯಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೂ ರಾಜಪಥದಲ್ಲಿ ಕಾರ್ಯಕ್ರಮ ಪ್ರದರ್ಶನಕ್ಕೂ ಚಿಂತನೆ ನಡೆಸಬಹುದು. ಜಂಬೂಸವಾರಿ ಬನ್ನಿಮಂಟಪ ತಲುಪಿ ಪಂಜಿನಕವಾಯತು ಮುಗಿದ ನಂತರ, ಗಜಪಡೆಯೊಂದಿಗೆ ಅಶ್ವಾರೋಹಿ ದಳ, ಮಿಲಿಟರಿ ಪೊಲೀಸರ ಬೈಕ್ ಸವಾರಿ ಇನ್ನಿತರ ಕಲಾತಂಡಗಳು ಅರಮನೆವರೆಗೆ ವಾಪಸ್ಸಾದರೆ ಇನ್ನೂ ಅದ್ಭುತವಾಗಿರುತ್ತದೆ. ಗಣರಾಜ್ಯೋತ್ಸವ ಪೆರೆಡ್ ಮಾದರಿಯಲ್ಲಿ ಜನ ವೀಕ್ಷಣೆ ಮಾಡಬಹುದು.
ದಸರಾ ಆರಂಭಕ್ಕೆ 15-20 ದಿನಗಳಿರುವಾಗ ತರಾತುರಿಯಲ್ಲಿ ಸಿದ್ಧತೆ ನಡೆಸುವ ಬದಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತೀ ತಿಂಗಳೂ ಅಧಿಕಾರಿಗಳ ಸಭೆ ನಡೆಸಿ, ಚರ್ಚಿಸಬೇಕು. ಪ್ರವಾಸೋದ್ಯಮ, ವಾಣಿಜ್ಯೋದ್ಯಮದ ಮೂಲಕ ಒಂದು ತಿಂಗಳಲ್ಲಿ ವರ್ಷದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.
ಈ ರೀತಿಯಲ್ಲಿ ಜನಸಾಮಾನ್ಯರಿಗೂ ದಸರಾ ವೀಕ್ಷಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಪ್ರತ್ಯಕ್ಷವಾಗಿ ವಿಜಯದಶಮಿ ಮೆರವಣಿಗೆ ನೋಡಬೇಕೆಂಬ ಮಹಾದಾಸೆ ಉಳ್ಳವರಿಗೂ ಅವಕಾಶ ಸಿಗುತ್ತದೆ.
ರಾಜಮಹಾರಾಜರ ಕಾಲದ ಮೈಸೂರು ದಸರೆಗೆ ತನ್ನದೆ ಆದ ಘನತೆ ಮತ್ತು ಪಾವಿತ್ರ್ಯತೆ ಇದೆ. ಅದನ್ನು ಉಳಿಸುವ ಕೆಲಸ ಆಗಬೇಕು. ಇದಕ್ಕಾಗಿ ದಸರಾ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications