ಬರದ ನೋವು, ಕಾವೇರಿ ಕಿಚ್ಚು: ಮಂದಗತಿಯಲ್ಲಿ ನಾಡಹಬ್ಬ ದಸರಾ ಸಿದ್ಧತೆ

ಮೈಸೂರು, ಸೆಪ್ಟೆಂಬರ್‌ 24: ಐತಿಹಾಸಿಕ ಮೈಸೂರು ದಸರಾ ಆಚರಣೆಯ ಮೇಲೆ ಬರದ ಕರಿಛಾಯೆ ಆವರಿಸಿದೆ. ಜೊತೆಗೆ ರಾಜ್ಯದಲ್ಲಿ ಅದರಲ್ಲೂ ಹಳೆ ಮೈಸೂರು ವ್ಯಾಪ್ತಿಯಲ್ಲಿ ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ಉಗ್ರರೂಪ ತಾಳುತ್ತಿದೆ. ಇದರ ನಡುವೆಯೇ ದಸರಾ ವೇಳೆಗೆ ಒಂದಷ್ಟು ಯೋಜನೆಗಳನ್ನು ಮಾಡಿ ಮುಗಿಸುವ ಸಂಕಲ್ಪ ಮಾಡಲಾಗಿತ್ತು. ಆದರೆ ಅದು ಸಾಧ‍್ಯವಾಗುತ್ತಾ?

ಈಗಾಗಲೇ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿ ಸಾಗುವ ರಾಜ ಮಾರ್ಗದ ರಸ್ತೆ, ಫುಟ್ ಪಾತ್, ವೃತ್ತಗಳು ಮಾತ್ರವಲ್ಲದೆ, ನಗರದ ಕೆಲವು ಭಾಗಗಳಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿವೆ. ಇದರ ಜತೆಗೆ ಜಂಬೂಸವಾರಿಗೆ ಬೇಕಾದ ತಾಲೀಮನ್ನು ಗಜಪಡೆ ದಿನ ನಿತ್ಯವೂ ಮಾಡುತ್ತಿವೆ. ಇದರ ನಡುವೆ ಅರಮನೆಯಲ್ಲಿಯೂ ದಸರಾ ಕೈಂಕರ್ಯಗಳಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

Mysuru Dasara 2023 Preparation Going Slowly

ಕಳೆದ ಒಂದೆರಡು ತಿಂಗಳ ಹಿಂದೆ ಮಳೆಯಿಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿ ಕಾವೇರಿ ವಿವಾದ ಭುಗಿಲೇಳುತ್ತದೆ ಎನ್ನುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆಗ ಅದ್ಧೂರಿ ದಸರಾದ ಕನಸು ಕಾಣಲಾಗಿತ್ತು. ಎಲ್ಲವೂ ಸರಿಹೋಗಿದೆ ಹೀಗಾಗಿ ದಸರಾ ಅದ್ಧೂರಿಯಾಗಿ ನಡೆದರೆ ಆ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬಹುದೆಂದು ನಂಬಲಾಗಿತ್ತು. ಜೊತೆಗೆ ಸರ್ಕಾರವೂ ಅದ್ಧೂರಿ ದಸರಾದ ವಾಗ್ದಾನ ಮಾಡಿತ್ತು. ಆದರೀಗ ಎಲ್ಲವೂ ಉಲ್ಟಾ ಆಗಿದೆ. ಸಾಂಪ್ರದಾಯಿಕ ದಸರಾ ಎನ್ನುವ ಮೂಲಕ ಪರೋಕ್ಷವಾಗಿ ಸರಳ ಆಚರಣೆ ಎನ್ನುವುದನ್ನು ಮನದಟ್ಟು ಮಾಡಿಸಲಾಗುತ್ತಿದೆ.

ಕಠಿಣ ಪರಿಸ್ಥಿತಿಯಲ್ಲಿ ದಸರಾ ಆಚರಣೆ

ಇಡೀ ರಾಜ್ಯದ ಜನ ಬರದಿಂದ ಬೇಯುತ್ತಿದ್ದಾರೆ. ರೈತರ ಬದುಕು ಮೂರಾಬಟ್ಟೆಯಾಗಿದೆ. ಇನ್ನೊಂದೆಡೆ ಹಳೇ ಮೈಸೂರು ಭಾಗದಲ್ಲಿ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಮುಂದಿನ ಮಳೆಗಾಲದ ತನಕ ಕುಡಿಯಲು ನೀರು ಸಿಗುವುದೇ ಕಷ್ಟವಾಗಿರುವಾಗ ರೈತರು ಬೆಳೆ ಬೆಳೆಯುವುದಾದರೂ ಹೇಗೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ಬೆಳೆದಿಲ್ಲ ಎಂದಾದರೆ ಅವರ ಜೀವನ ಹೇಗೆ ಪ್ರಶ್ನೆಗಳು ಉದ್ಭವಿಸಿವೆ. ಜತೆಗೆ ಕಾವೇರಿ ಕಿಚ್ಚು ಉಗ್ರರೂಪ ತಾಳುತ್ತಿದೆ. ಇಂತಹ ಕಠಿಣ ಸ್ಥಿತಿಯಲ್ಲಿ ದಸರಾ ಆಚರಣೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ.

ಈಗಾಗಲೇ ಸಾಂಪ್ರದಾಯಿಕ ದಸರಾ ಆಚರಣೆ ಮಾಡುವುದಾಗಿ ಸರ್ಕಾರ ಹೇಳುತ್ತಿರುವುದರಿಂದ ದಸರಾ ಅಂಗವಾಗಿ ನಡೆಯುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಡಲೇ ಬೇಕಾಗಿದೆ. ಜೊತೆಗೆ ದೀಪಾಲಂಕಾರಕ್ಕೆ ಹೆಚ್ಚಿನ ಖರ್ಚು ವೆಚ್ಚ ತಗಲುವುದರಿಂದ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕೂಡ ಮುಖ್ಯವಾಗಲಿದೆ. ಈ ಹಿಂದೆ ಜಂಬೂಸವಾರಿ ಸಾಗುವ ಮಾರ್ಗದ ರಸ್ತೆ, ಫುಟ್‌ಪಾತ್ ಸರಿಪಡಿಸುವ ಜತೆಗೆ ಅರಮನೆ ಸುತ್ತಮುತ್ತಲಿರುವ ಐದು ಪ್ರಮುಖ ವೃತ್ತಗಳಿಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡುವ ವಾಗ್ದಾನವನ್ನು ಮಹಾನಗರಪಾಲಿಕೆ ಮಾಡಿತ್ತು. ಅದು ಸಾಧ‍್ಯವಾಗುತ್ತದಾ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

Mysuru Dasara 2023 Preparation Going Slowly

ಐದು ವೃತ್ತಗಳಿಗೆ ಶಾಶ್ವತ ಅಲಂಕಾರ ಆಗುತ್ತಾ?

ಕೆಲವು ದಿನಗಳ ಹಿಂದೆ ಮಹಾನಗರಪಾಲಿಕೆ ಮೇಯರ್ ಶಿವಕುಮಾರ್ ಅಧಿಕಾರಿಗಳೊಂದಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ಸಾಗುವ ಮಾರ್ಗ, ಸಬ್‌ವೇ, ವೃತ್ತಗಳನ್ನು ವೀಕ್ಷಣೆ ಮಾಡಿ ಹಲವಾರು ವಿಚಾರಗಳ ಬಗ್ಗೆ ಚಿರ್ಚಿಸಿದ ಬಳಿಕ ಐದು ಪ್ರಮುಖ ವೃತ್ತಗಳಿಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಾಮರಾಜ ವೃತ್ತ, ಚಾಮರಾಜೇಂದ್ರ ಒಡೆಯರ್ ವೃತ್ತ, ಗಾಂಧಿವೃತ್ತ, ಅಂಬೇಡ್ಕರ್ ಪ್ರತಿಮೆ ಇರುವ ವೃತ್ತಗಳನ್ನು ಆಕರ್ಷಣಾ ಕೇಂದ್ರವಾಗಿ ಮಾಡುವ ಸಂಕಲ್ಪ ತೊಡಲಾಗಿತ್ತು.

ಈ ಐದು ವೃತ್ತಗಳು ನಗರಕ್ಕೆ ಕಳಸದಂತಿದ್ದು ಇಲ್ಲಿ ಗಾರ್ಡನಿಂಗ್ ಮಾಡುವುದು ಜತೆಗೆ ಶಾಶ್ವತ ದೀಪಾಲಂಕಾರ ಮಾಡುವುದು. ವಾರದ ರಜಾ ದಿನವಾದ ಶನಿವಾರ ಮತ್ತು ಭಾನುವಾರ ಅರಮನೆಯಲ್ಲಿ ದೀಪಾಲಂಕಾರದ ಸಮಯದಲ್ಲಿ ಈ ವೃತ್ತಗಳ ದೀಪಾಲಂಕಾರ ಇರುವಂತೆ ನೋಡಿಕೊಳ್ಳುವುದು. ಹಾಗೆಯೇ ವೃತ್ತಗಳಿಗೆ ಆಕರ್ಷಕ ರೀತಿಯಲ್ಲಿ ಹೂವಿನ ಕುಂಡಗಳನ್ನು ಜೋಡಿಸಿ ನಿರ್ವಹಣೆ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು.

ಕಾರ್ಯಗತವಾಗುತ್ತಾ ಹಲವು ಯೋಜನೆ

ದಸರಾ ಸಮಯಲ್ಲಿ ಚಿಕ್ಕಗಡಿಯಾರ ವೃತ್ತದ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಸುತ್ತಲೂ ದೀಪದ ವ್ಯವಸ್ಥೆ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸಾರ್ವಜನಿಕರು ತಿರುಗಾಡಲು ಅನುವು ಮಾಡಿಕೊಡುವ ಸಂಕಲ್ಪ ಮಾಡಲಾಗಿತ್ತು. ಇಷ್ಟೇ ಅಲ್ಲದೆ, ಮೈಸೂರು ನಗರ ಬಸ್ ನಿಲ್ದಾಣದಿಂದ ಹಾರ್ಡಿಂಜ್ ವೃತ್ತ, ಹಾರ್ಡಿಂಜ್ ವೃತ್ತದಿಂದ ಪುರಭವನ, ಕರ್ಜನ್ ಪಾರ್ಕ್‌ವರೆಗೆ, ಕೆ.ಆರ್.ವೃತ್ತದಿಂದ ಆಯುರ್ವೇದ ವೃತ್ತದವರೆಗೆ ಸಾಗುವ ಮಾರ್ಗದ ರಸ್ತೆಯ ಫುಟ್‌ಪಾತ್‌ನಲ್ಲಿ ಅಳವಡಿಸಿರುವ ಸ್ಲ್ಯಾಬ್‌ಗಳಲ್ಲಿ ಕೆಲವು ಒಡೆದು ಹೋಗಿ, ಮುರಿದುಬಿದ್ದಿರುವುದನ್ನು ಬದಲಿಸಿ ಹೊಸದಾಗಿ ಹಾಕಲು ಸೂಚಿಸಲಾಗಿತ್ತು.

Mysuru Dasara 2023 Preparation Going Slowly

ಇನ್ನು ಹಾಳಾಗಿರುವ ಬ್ಯಾರಿಕೇಡ್‌ಗಳನ್ನು ತೆಗೆದು ಹೊಸದಾಗಿ ಹಾಕುವುದು, ನಗರ ಬಸ್ ನಿಲ್ದಾಣದ ಸುತ್ತಮುತ್ತಲ ಫುಟ್‌ಪಾತ್ ಹಾಳಾಗಿ ಗ್ರಾನೈಟ್ ಚಪ್ಪಡಿ ಕಲ್ಲು ಕಳಚಿ ಸಾರ್ವಜನಿಕರು ಓಡಾಡುವುದಕ್ಕೆ ತೊಂದರೆಯಾಗಿರುವುದನ್ನು ತಪ್ಪಿಸುವ ದೃಷ್ಟಿಯಿಂದ ದುರಸ್ತಿ ಮಾಡಿಸುವುದು ಹೀಗೆ ದಸರಾ ಹಿನ್ನಲೆಯಲ್ಲಿ ಹಲವಾರು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಇದೆಲ್ಲವೂ ದಸರಾ ವೇಳೆಗೆ ಕಾರ್ಯಗತವಾಗುತ್ತಾ ಎಂಬುದೇ ಸಂಶಯವಾಗಿದೆ.

ಮಂದಗತಿಯಲ್ಲಿ ಸಾಗಿದ ದಸರಾ ಚಟುವಟಿಕೆ

ಇಷ್ಟರಲ್ಲೇ ದಸರಾಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳು ಆರಂಭವಾಗಬೇಕಿತ್ತು. ಆದರೆ ಇವತ್ತಿನ ಪ್ರಕ್ಷುಬ್ದ ಪರಿಸ್ಥಿತಿ ನಡುವೆ ದಸರಾಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿ ಮೈಸೂರಿನ ದಸರಾ ಸಂಭ್ರಮಕ್ಕೆ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಸರಳವಲ್ಲದ ಸಾಂಪ್ರದಾಯಿಕ ದಸರಾ ಎಂದು ಸರ್ಕಾರ ಘೋಷಣೆ ಮಾಡಿದ್ದು, ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+