ಮೈಸೂರಿನ ಸಂತರು ಸಿದ್ದಗಂಗಾ ಶ್ರೀಗಳನ್ನು ನೆನೆದದ್ದು ಹೀಗೆ...
ಮೈಸೂರು, ಜನವರಿ 22: "ಬಸವಣ್ಣ, ಸಂತ, ದಾರ್ಶನಿಕರನ್ನು ನಾವು ನೋಡಿಲ್ಲ. ಆದರೆ, 21ನೇ ಶತಮಾನದಲ್ಲಿ ಆಧುನಿಕ ಬಸವಣ್ಣನಂತೆ ಸಾಧನೆ ಮಾಡಿದ ಸಿದ್ಧಗಂಗಾ ಶ್ರೀಗಳನ್ನು ನೋಡಿದ್ದೇವೆ. ಇದು ನಮ್ಮ ಸುದೈವ. ಈ ದೃಷ್ಟಿಯಿಂದ ಇವರು ಜಗದ ಜಂಗಮರೂ ಹೌದು. ನಡೆದಾಡುವ ದೇವರೂ ಹೌದು.
ಮುಂದಿನವರು ಇಂತಹ ಘನಶರಣರ ಸಾಧನೆ ಸಿದ್ಧಿಯನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಶೀಲರಾಗಬೇಕು. ದಾಸೋಹ ಮೂರ್ತಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ಶತಮಾನದ ಸಂತ, ದಾರ್ಶನಿಕರನ್ನು ಕಳೆದುಕೊಂಡಿರುವುದು ನಾಡಿಗೆ ತುಂಬಲಾರದ ನಷ್ಟ" ಎನ್ನುತ್ತಾರೆ ಹೊಸಮಠದ ಚಿದಾನಂದ ಸ್ವಾಮಿ.
In Pics: ಕೈಲಾಸಕ್ಕೆ ಹೊರಟರು ಶಿವ ಶರಣ ಶಿವಕುಮಾರ ಸ್ವಾಮಿ
ಕಾಗಿನೆಲೆ ಕನಕ ಗುರು ಪೀಠ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಶ್ರೀಗಳು 111 ವರ್ಷ ಯುಗಪುರುಷರಾಗಿ ಬದುಕಿದವರು. ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಂಡವರು. ಜೀವನದುದ್ದಕ್ಕೂ ಬಡಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಮಯ ಕಳೆದವರು. ಅವರು ಶಿವೈಕ್ಯರಾಗಿರುವುದು ಬಹಳ ದುಃಖ, ನೋವುಂಟು ಮಾಡಿದೆ ಎಂದರು.

ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ವಿಚಾರ ತಿಳಿದು ಮನಸ್ಸಿಗೆ ಆಘಾತ ಉಂಟಾಗಿದೆ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದ್ದಾರೆ. ಅವರು ಮಾಡಿದ ದಾಸೋಹ, ಜ್ಞಾನದಾನ ಮರೆಯಲಾಗದ ಸೇವೆಗಳು. ಅವರೊಬ್ಬ ಪವಾಡ ಪುರುಷ. ಅವರ ಶಿಷ್ಯವೃಂದ ಯಾವುದೇ ರೀತಿಯಲ್ಲಿ ಅತೃಪ್ತಿ ಪಡಬಾರದು. ಅವರಿನ್ನೂ ಇದ್ದಾರೆ ಎಂದು ತಿಳಿದು ಅವರ ಸೇವೆಯನ್ನು ಪ್ರತಿ ಮಗುವಿನಲ್ಲೂ ನೋಡಬೇಕು ಎಂದು ಹೇಳಿದ್ದಾರೆ.
ಶ್ರೀಗಳು ಅನುಪಮ ಸಾಮಾಜಿಕ ಸೇವೆ, ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಗಳಿಂದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದವರು. ಪವಿತ್ರ ಗೋಸಲ ಪರಂಪರೆಗೆ ಸೇರಿದ ತೋಂಟದ ಸಿದ್ಧಲಿಂಗೇಶ್ವರ ಪರಂಪರೆಯಲ್ಲಿ ಸನ್ಯಾಸ ಸ್ವೀಕರಿಸಿದ್ದ ಪೂಜ್ಯರು ತಮ್ಮ ಸಮಾಜ ಉದ್ಧಾರ ಕಾರ್ಯಗಳಿಂದ ಅಭಿನವ ಬಸವಣ್ಣರೆಂದೇ ಹೆಸರು ಪಡೆದವರು. ಭೌತಿಕವಾಗಿ ಈಗ ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಸೇವಾ ಕಾರ್ಯ ಸದಾ ಮಾರ್ಗದರ್ಶಿ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿಯಲ್ಲಿ ನೆನೆಯಲಾಯಿತು.












Click it and Unblock the Notifications