ಪ್ರಿಯಕರನಿಗಾಗಿ ಮಗುವಿನೊಂದಿಗೆ ಧರಣಿ ನಡೆಸುತ್ತಿರುವ ಯುವತಿ
ಮೈಸೂರು, ಜುಲೈ 10: ಹೆಣ್ಣು ಮಗಳೊಬ್ಬಳ ಭವಿಷ್ಯವನ್ನೇ ಹಾಳು ಮಾಡುವಂತಹ ಘಟನೆಯೊಂದು ಇದೀಗ ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ನಡೆದಿದೆ. ಚಿನ್ನ ರನ್ನ ಎನ್ನುತ್ತಾ ಹಿಂದೆ ಬಿದ್ದು ಪ್ರೀತಿಸಿ ಮದುವೆಯಾಗುತ್ತೇನೆಂದು ದೈಹಿಕ ಸಂಪರ್ಕ ಬೆಳೆಸಿ ಆಕೆಗೆ ಮಗುವನ್ನು ಕರುಣಿಸಿದ ಯುವಕ ಇದೀಗ ನಾಪತ್ತೆಯಾಗಿದ್ದಾನೆ. ಆಕೆ ಕೈನಲ್ಲಿ ಮಗು ಹಿಡಿದುಕೊಂಡು ಆತನ ಮನೆ ಮುಂದೆ ಧರಣಿ ಕೂತಿದ್ದಾಳೆ.
ತನ್ನದೇ ವಯಸ್ಸಿನ ಹುಡುಗಿಗೆ ಮಗುವನ್ನು ಕರುಣಿಸಿ ನಾಪತ್ತೆಯಾದವನ ಹೆಸರು ಸಂಜಯ್(20). ಹಾಗೆನೋಡಿದರೆ ಈತ ಇನ್ನೂ ಅಪ್ರಾಪ್ತ. ಮದುವೆ ವಯಸ್ಸಿಗೆ ಇನ್ನೂ ಒಂದು ವರ್ಷ ಕಾಯಬೇಕು. ಈತ ಅದೇ ಗ್ರಾಮದ ಶೈಲಜ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ.

ಸಂಜಯ್ ಪದವಿ ಕಾಲೇಜಿನಲ್ಲಿ ಓದುತ್ತಿದ್ದರೆ, ಶೈಲಜಾ ಡಿಪ್ಲೋಮಾ ಮಾಡುತ್ತಿದ್ದಳು. ಆಕೆಯ ಮನವೊಲಿಸಿ ಪ್ರೀತಿಸಿದ ಸಂಜಯ್ ಕಾಲೇಜು ಬಿಟ್ಟು ಆಕೆಯೊಂದಿಗೆ ಎಲ್ಲೆಂದರಲ್ಲಿ ಸುತ್ತಾಡತೊಡಗಿದ್ದನಲ್ಲದೆ, ಮದುವೆಯಾಗುವುದಾಗಿ ಮನವೊಲಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿಯಾಗಿರುವುದು ಗೊತ್ತಾಗುತ್ತಿದ್ದಂತೆಯೇ ಅವರ ಮನೆಗೆ ತೆರಳಿ ತಾನೇ ಮದುವೆಯಾಗುವುದಾಗಿ ನಂಬಿಸಿದ್ದ. ಹೀಗಾಗಿ ಯುವತಿಯ ಮನೆಯವರು ಸುಮ್ಮನಾಗಿದ್ದಾರೆ. ಇದೀಗ ಯುವತಿ ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ ಸಂಜಯ್ ನಾಪತ್ತೆಯಾಗಿದ್ದಾನೆ.

ವಂಚನೆಗೊಳಗಾದ ಯುವತಿ ಈಗ ತನ್ನ ಪೋಷಕರೊಂದಿಗೆ ಸಂಜಯ್ ಮನೆ ಮುಂದೆ ಕುಳಿತು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದಾಳೆ.












Click it and Unblock the Notifications