ರಾಷ್ಟ್ರೀಯ ಬಾಡ್ಮಿಂಟನ್: ಮೈಸೂರಿನ ವಿದ್ಯಾರ್ಥಿನಿ ದಿಯಾ ಭೀಮಯ್ಯಗೆ ಪದಕಗಳ ಸುರಿಮಳೆ
ಮೈಸೂರು, ಅಕ್ಟೋಬರ್ 25: ಅಕ್ಟೋಬರ್ 20ನೇ ತಾರೀಖಿನಿಂದ 25ನೇ ತಾರೀಖಿನವರೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆದ 36ನೇ ಸಬ್ ಜೂನಿಯರ್ ಯೋನೆಕ್ಸ್ ಸನ್ ರೈಸ್ ರಾಷ್ಟ್ರೀಯ ಬಾಡ್ಮಿಂಟನ್ ಪಂದ್ಯಾಟದಲ್ಲಿ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಡಬ್ಬಲ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.
ರಾಜ್ಯದ ಪ್ರಥಮ ಶ್ರೇಯಾಂಕಿತ ಆಟಗಾರ್ತಿಯಾದ ದಿಯಾ ಅವರು 17 ವರ್ಷದೊಳಗಿನ ಸಿಂಗಲ್ಸ್, ಡಬಲ್ಸ್ ಹಾಗು ಮಿಶ್ರ ಡಬಲ್ಸ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು. ಇವರು ಡಬಲ್ಸ್ ನಲ್ಲಿ ತಮಿಳುನಾಡಿನ ವರ್ನಾ ಪಿ ಅವರೊಂದಿಗೆ ಕೂಡಿ ಆಡಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮಿಶ್ರ ಡಬಲ್ಸ್ ನಲ್ಲಿ ಮೈಸೂರಿನ ಅಮಿತ್ ರಾಜ್ ನಟರಾಜ್ ಜೊತೆ ಕೂಡಿ ಆಡಿ ತೃತೀಯ ಸ್ಥಾನ ಗಳಿಸಿದ್ದು, ಸಿಂಗಲ್ಸ್‌ನಲ್ಲಿ ಪ್ರಥಮ ಶ್ರೇಯಾಂಕಿತ ಮತ್ತು ಚಾಂಪಿಯನ್ ಆಗಿ ಹೊರ ಹೊಮ್ಮಿದ ಒಡಿಸದ ತಾನ್ವಿ ಪತ್ರಿ ಅವರಿಂದ ಕ್ವಾಟರ್ ಫೈನಲ್ ನಲ್ಲಿ ಪರಾಭವ ಹೊಂದಿದರು.
ಭಾಗವಹಿಸಿದ ಮೂರು ವಿಭಾಗದಲ್ಲಿ ಶ್ಲಾಘನೀಯ ಫಲಿತಾಂಶ ತಂದ ಬೊಪ್ಪಂಡ ದಿಯಾ ಭೀಮಯ್ಯ ಮೈಸೂರಿನ ವಿದ್ಯಾಶ್ರಮ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ದಿಯಾ ಮಡಿಕೇರಿಯ ದೇಚೂರಿನ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ಅವರ ಪುತ್ರಿ. ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬೊಪ್ಪಂಡ ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಮೈಸೂರಿನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಕರ್ನಾಟಕ ಕಲಾಮಂದಿರದಲ್ಲಿ ಸಂಜೆ 5 ಗಂಟೆಗೆ ವಿವಿಧ ಕಲಾತಂಡಗಳಿoದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್ ತಿಳಿಸಿದರು.
ಹಳೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಉಪ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಕಲಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು. ಅಂದು ಸಂಜೆ 5 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ಸುಮಾರು 6 ರಿಂದ 8 ತಂಡದ 230 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ತಂಡಕ್ಕೆ ನೆನಪಿನ ಕಾಣಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳನ್ನೊಳಗೊಡಂತೆ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜವರೇಗೌಡ, ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿ ಸೇರಿದಂತೆ ನೆಹರು ಯುವ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.












Click it and Unblock the Notifications