ದಸರಾ ಉತ್ಸವ ಬಹಿಷ್ಕಾರ: ಕಲಾವಿದರ ನಿರ್ಧಾರ
ಮೈಸೂರು, ಸೆ.12: ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತದೆ. ನಾವು ನಾಡಹಬ್ಬ ಎಂದು ಅನುಸರಿಸಿಕೊಂಡು ಹೋಗುತ್ತಾ ಬಂದಿದ್ದೇವೆ. ಆದರೆ, ಈ ಬಾರಿ ಸರಿಯಾದ ಸಂಭಾವನೆ ಸಿಗದಿದ್ದರೆ ದಸರಾ ಉತ್ಸವದಲ್ಲಿ ಯಾವ ಜಾನಪದ್ ಕಲಾವಿದರು ಪಾಲ್ಗೊಳ್ಳುವುದಿಲ್ಲ ಎಂದು ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಎಚ್ಚರಿಸಿದೆ.
ಕಳೆದ ಮೂರು ವರ್ಷಗಳಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜಾನಪದ ಕಲಾವಿದರಿಗೆ ಉತ್ತಮ ಸಂಭಾವನೆ ನೀಡಲಾಗುತ್ತದೆ ಎಂದು ಸರ್ಕಾರಗಳು ಭರವಸೆ ನೀಡುತ್ತಲೇ ಬಂದಿವೆ. ಅದರೆ, ಇದುವರೆವಿಗೂ ಆಶ್ವಾಸನೆಗಳು ಈಡೇರಿಲ್ಲ ಎಂದು ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಖ್ಯಾತ ಜಂಬೂಸವಾರಿ ಮೆರವಣಿಗೆ ಸೇರಿದಂತೆ ಮೂರ್ನಾಲ್ಕು ದಿನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ತಲಾ ಒಬ್ಬರಿಗೆ ಕೇವಲ 500 ರು ನೀಡಲಾಗುತ್ತದೆ. ಆದರೆ, ಇಡೀ ಜಾನಪದ ತಂಡಕ್ಕೆ ಕನಿಷ್ಠ 50 ಸಾವಿರ ರು ಸಂಭಾವನೆ ನೀಡಬೇಕು. ವಾಹನ ಬಾಡಿಗೆ, ಉತ್ತಮ ಊಟ, ವಸತಿ ಸೌಕರ್ಯ ಒದಗಿಸಬೇಕು ಎಂದು ಸಿದ್ದರಾಜು ಆಗ್ರಹಿಸಿದ್ದಾರೆ.

ಈಗಾಗಲೇ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಿಗೆ ಪಿಎಸ್ ಐ, ಇಎಸ್ ಐ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಜಾನಪದ ಕಲಾವಿದರಿಗೂ ಸೌಲಭ್ಯ ಸಿಗಬೇಕು. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಜಾನಪದ ಕಲಾವಿದರಿದ್ದಾರೆ. ಆದರೆ, ಮೂಲ ಸೌಲಭ್ಯ ವಂಚಿತರಾಗಿದ್ದು, ಕನಿಷ್ಠ ವೇತನ ಕೂಡಾ ಸಿಗದೆ ಕಲೆಯಾಗಿ ಜೀವನ ಮುಡಿಪಿಟ್ಟಿದ್ದಾರೆ ಎಂದು ಸಿದ್ದರಾಜು ಹೇಳಿದರು.












Click it and Unblock the Notifications