ಮೋದಿ ಪಾಲ್ಗೊಳ್ಳುವ ಯೋಗ ಕಾರ್ಯಕ್ರಮಕ್ಕೆ ಎಷ್ಟು ಮಂದಿಗೆ ಅವಕಾಶ?
ಮೈಸೂರು, ಜೂನ್ 5: ಜೂನ್ 21ರ ವಿಶ್ವ ಯೋಗ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಯೋಗ ಪಟುಗಳಿಂದ ಯೋಗ ತಾಲೀಮು ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಭಾನುವಾರ ಚಾಲನೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪ್ರಧಾನಮಂತ್ರಿಗಳು ಮೈಸೂರಿಗೆ ಆಗಮಿಸುತ್ತಿರುವುದರಿಂದ ಜೂನ್ 5 ಮತ್ತು 12ರಂದು ಯೋಗ ತಾಲೀಮು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯಾರಿಗೆಲ್ಲಾ ಅವಕಾಶ ನೀಡಬೇಕು? ಎಂಬುದರ ಬಗ್ಗೆ ಜೂನ್ 12ರ ನಂತರ ತೀರ್ಮಾನ ಮಾಡಲಾಗುವುದು" ಎಂದರು.
"ಯೋಗ ಮಾಡುವವರಿಗೆಲ್ಲಾ ಅವಕಾಶ ಮಾಡಿಕೊಡಬೇಕೆಂದು ನಿರ್ಧರಿಸಲಾಗಿದೆ. ಸರ್ಕಾರಿ, ಖಾಸಗಿ ಸಂಸ್ಥೆಯ ಉದ್ಯೋಗಿಗಳು, ವಿಶೇಷಚೇತನರು ಸೇರಿದಂತೆ ಯೋಗ ಮಾಡುವ ಎಲ್ಲರಿಗೂ ಅವಕಾಶ ನೀಡಲಾಗುವುದು. ಕಾರ್ಯಕ್ರಮಕ್ಕೆ ಸದ್ಯಕ್ಕೆ ನೋಂದಣಿ ಆರಂಭವಾಗಿಲ್ಲ. ನೋಂದಣಿ ಸಂಬಂಧ ನಿರ್ದೇಶಕರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳು ಜೂನ್ 8ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅಂದು ಕಾರ್ಯಕ್ರಮದ ರೂಪುರೇಷೆ ಅಂತಿಮವಾಗಲಿದೆ" ಎಂದು ಸಚಿವರು ಹೇಳಿದರು.

"ರಾಜ್ಯ ಸರ್ಕಾರದಿಂದ 12 ಸಾವಿರ, ಕೇಂದ್ರ ಸರ್ಕಾರದಿಂದ ಮೂರು ಸಾವಿರ ಸೇರಿ ಒಟ್ಟು 15 ಸಾವಿರ ನೋಂದಣಿ ಆಗಲಿದೆ ಎಂಬ ಮಾಹಿತಿ ಇದೆ. ಆದರೆ ಸದ್ಯಕ್ಕೆ ಯಾವುದು ಅಂತಿಮವಾಗಿಲ್ಲ. ಮುಖ್ಯಮಂತ್ರಿಗಳು ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ, ಇವತ್ತು 20 ಸಾವಿರಕ್ಕೂ ಹೆಚ್ಚು ಮಂದಿ ಯೋಗ ತಾಲೀಮಿನಲ್ಲಿ ಪಾಲ್ಗೊಂಡಿದ್ದಾರೆ" ಎಂದು ಎಸ್. ಟಿ. ಸೋಮಶೇಖರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶಾಸಕರಾದ ರಾಮದಾಸ್, ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರಾ, ಯೋಗ ಫೆಡರೇಷನ್ ಮುಖ್ಯಸ್ಥರು ಭಾಗವಹಿಸಿದ್ದರು.
ಮೈಸೂರು ರಸ್ತೆಗಳ ದುರಸ್ತಿ; ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಮೈಸೂರಿನ ರಸ್ತೆಗಳಿಗೆ ದುರಸ್ತಿ ಭಾಗ್ಯ ಲಭಿಸಿದೆ. ಸದ್ಯ 15 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡುವ ಪ್ರಸ್ತಾವವನ್ನು ನಗರಪಾಲಿಕೆ ಸರಕಾರಕ್ಕೆ ಸಲ್ಲಿಸಿದೆ. ಜೊತೆಗೆ ಕಾಮಗಾರಿ ಶುರು ಮಾಡಲು ಸರಕಾರ ಅನುಮತಿ ನೀಡಿರುವುದರಿಂದ ಪಾಲಿಕೆ ಕೆಲಸವನ್ನು ಚುರುಕುಗೊಳಿಸಿದೆ.

''ಪ್ರಧಾನಿ ಮೋದಿ ಅವರು ಅರಮನೆ ಆವರಣದಲ್ಲೇ ಯೋಗ ಪ್ರದರ್ಶನ ಮಾಡುವುದರಿಂದ ರಾಜಪಥವನ್ನು ದುರಸ್ತಿಗೊಳಿಸುವ ಕೆಲಸ ಕೈಗೆತ್ತಿಗೊಂಡಿದ್ದೇವೆ. ರಾಜಪಥದ ಟೈಲ್ಸ್ ಕಿತ್ತು ಬಂದಿದೆ. ಅಲ್ಲಲ್ಲಿ ಗುಂಡಿ ಬಿದ್ದಿದೆ. ಇದನ್ನು ಸರಿಪಡಿಸಲು ಪಾಲಿಕೆ ನಿರ್ಧರಿಸಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ'' ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications