ಮಲ್ಲಿಕಾರ್ಜುನ ಬೆಟ್ಟದ ಬಳಿ ಪ್ರೇಮಿಗಳು ಆತ್ಮಹತ್ಯೆ, ಡೆತ್ ನೋಟ್ ನಲ್ಲಿ ಏನಿತ್ತು?
ಮೈಸೂರು, ನವೆಂಬರ್. 27: ಜೀವನದಲ್ಲಿ ಜಿಗುಪ್ಸೆಗೊಂಡ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ನಡೆದಿದೆ.
ತಾಲೂಕಿನ ನಾಗನಹಳ್ಳಿ ದೊಡ್ಡೇಗೌಡನಕೊಪ್ಪಲು ಗ್ರಾಮದ ನಿವಾಸಿಯಾದ ಪಿಯುಸಿ ವಿದ್ಯಾರ್ಥಿನಿ ಡಿ.ಎಲ್. ವೀಣಾ ಮತ್ತು ಕೆಳಗನಹಳ್ಳಿ ದೊಡ್ಡಕೊಪ್ಪಲು ಗ್ರಾಮದ ನಿವಾಸಿ ಕೆ.ಎನ್.ಸ್ವಾಮಿ ಎಂಬುವರು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.
ಈ ಪ್ರೇಮಿಗಳು ತಾಲೂಕಿನ ಬೆಟ್ಟದಪುರದ ಸಿಡಿಲು ಬೆಟ್ಟದ ವೀರಭದ್ರನ ಗುಡಿಯ ಬಳಿ ಮರಕ್ಕೆ ಕಟ್ಟಿದ್ದ ಟಿಬೆಟಿಯನ್ ಬಾವುಟಗಳಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ (ನವೆಂಬರ್ 26) ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ದೇವರ ದರ್ಶನಕ್ಕಾಗಿ ಕುಟುಂಬದ ಸದಸ್ಯರೊಂದಿಗೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಹತ್ತುತ್ತಿದ್ದ ವೇಳೆಯಲ್ಲಿ ಪ್ರೇಮಿಗಳ ಶವಗಳು ಮರಕ್ಕೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಕೂಡಲೇ ಅವರು ಬೆಟ್ಟದಪುರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಡೆತ್‍ನೋಟ್ ಬರೆದಿಟ್ಟ ಪ್ರೇಮಿಗಳು
ಇಬ್ಬರನ್ನು ಒಟ್ಟಿಗೆ ಕೆ.ಎನ್.ಸ್ವಾಮಿ ಊರಿನಲ್ಲಿಯೇ ಸುಡಬೇಕು. ಇದು ನನ್ನ ಆಸೆ ಎಂದು ವೀಣಾ ತಿಳಿಸಿದ್ದಾರೆ.
ಕೆ.ಎನ್.ಸ್ವಾಮಿ ಇದೇ ಪುಟದಲ್ಲಿ "ಅವ್ವ ನೀನು ಹೇಳುತ್ತಿದ್ದೇ... ನನ್ನ ಮಗ ಹೀರೋ ತರ ಕಾಣುತ್ತಾನೆ ಅಂತ. ಮುಂದಿನ ಜನ್ಮ ಅಂತ ಇದ್ದರೆ ನಿನ್ನ ಹೊಟ್ಟೆಯಲ್ಲಿಯೇ ಹುಟ್ಟಿ ಬರುತ್ತೀನಿ ಎಂದಿದ್ದಾರೆ. ಅಂತಿಮವಾಗಿ ನಮ್ಮ ಸಾವಿನ ಬಗ್ಗೆ ಚಿಂತಿಸಬೇಡಿ. ಎರಡು ಕುಟುಂಬದವರೂ ಒಳ್ಳೆಯವರೇ. ನಮ್ಮ ಇಷ್ಟದಂತೆ ಇದ್ದಾರೆ. ಆದರೆ ನಾವೇ ಅರ್ಥಮಾಡಿಕೊಳ್ಳದೇ ಸಾಯುತ್ತಿದ್ದೇವೆ" ಎಂದು ಇಬ್ಬರೂ ಕೊನೆ ಯಲ್ಲಿ ಸಹಿ ಮಾಡಿದ್ದಾರೆ.
ಈ ಡೆತ್ ನೋಟ್ ಒಂದೇ ಕೈಬರಹದಲ್ಲಿದ್ದು, ಸಹಿ ಮಾತ್ರ ಬೇರೆಯಾಗಿವೆ. ಇನ್ನು ಇಬ್ಬರು ಸಹ ಹತ್ತಿರದ ಸಂಬಂಧಿಗಳೇ ಆಗಿದ್ದಾರೆ. ಆದರೆ ಪ್ರೀತಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಕುಟುಂಬಗಳು ತಿಳಿಸಿವೆ.
ಒಟ್ಟಾರೆ ಪ್ರೇಮಿಸಿ ಇಬ್ಬರು ಸಾವನ್ನಪ್ಪಿರುವುದು ಎರಡು ಕುಟುಂಬಗಳಿಗೂ ತೀವ್ರ ಆಘಾತ ತಂದಿದೆ. ಪಿರಿಯಾಪಟ್ಟಣ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನುವಾರಸುದಾರರಿಗೆ ಒಪ್ಪಿಸಲಾಯಿತು. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications