ಎಸ್‌ಪಿಬಿಗೆ ಹೇರ್ ಕಟ್ ಮಾಡಿದ್ದ ಮೈಸೂರಿಗನ ನೆನಪಿನ ಮಾತು...
ಮೈಸೂರು, ಸೆಪ್ಟೆಂಬರ್ 26: ಚೆನ್ನೈನ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು, ಅವರ ಮುಗ್ಧತೆ, ಸರಳತೆಯನ್ನು ಕೊಂಡಾಡದವರೇ ಇಲ್ಲ. ಅಂಥದ್ದೇ ಒಂದು ಪುಟ್ಟ ನೆನಪನ್ನು ಮೈಸೂರಿನ ಈ ವ್ಯಕ್ತಿ ಮೆಲುಕು ಹಾಕಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರಿಗೆ ಹೇರ್‌ಕಟ್ ಮಾಡುವ ಅವಕಾಶ ಒಮ್ಮೆ ಮೈಸೂರಿನ ಈ ವ್ಯಕ್ತಿಗೆ ದೊರೆತಿತ್ತು. ಇವರ ಹೆಸರು ಲೋಕೇಶ್ ಬಾಬು. ಎಸ್‌ಪಿಬಿ ನಿಧನದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿರುವ ಬಾಬು, ಈ ಹಿಂದೆ ಅವರಿಗೆ ಹೇರ್‌ಕಟ್ ಮಾಡಿದ್ದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.
"ನಾನು ಆಗ ಸಂತೋಷ್ ಹೇರ್ ಕಟಿಂಗ್ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದೆ. ಒಬ್ಬರು ಬಂದು, ನಾಳೆ ನೀನು ಎಸ್‌ಪಿ ಸರ್ ಅವರಿಗೆ ಹೇರ್‌ಕಟ್ ಮಾಡಬೇಕು ಎಂದು ಕೇಳಿದರು. ನಾನು ಸರಿ ಸರ್ ಎಂದೆ. ಮತ್ತೆ ಆ ವ್ಯಕ್ತಿ ಮುಂಜಾನೆ ಬೆಳಿಗ್ಗೆ 7.30ಕ್ಕೆ ಬಂದು ನನ್ನನ್ನು ಅಂಬಾಸಿಡರ್ ಕಾರಿನಲ್ಲಿ ಕೂರಿಸಿಕೊಂಡು ಆರ್‌ಎಂಸಿಗೆ ಹೋದರು. ನಾನು ಕುತೂಹಲದಿಂದ ಸರ್ ಯಾವ ಎಸ್‌ಪಿ? ಮೈಸೂರಿನ ಎಸ್‌ಪಿ (ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಅವರಿಗೆ ಹೇರ್‌ಕಟ್ ಮಾಡಬೇಕಾ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕಣ್ರೀ ಎಂದರು. ಒಂದು ಕ್ಷಣ ನನಗೆ ಶಾಕ್ ಆಯಿತು" ಎಂದು ಲೋಕೇಶ್ ಆಗಿನ ಕ್ಷಣವನ್ನು ನೆನೆದರು.

ಮುಂದುವರಿದು, ʻಎಸ್ ಪಿಬಿ ಅವರ ಹೆಸರು ಕೇಳಿದಾಕ್ಷಣ ನನಗೆ ನನ್ನ ವೃತ್ತಿಯೇ ಹೊಸದೇನೊ ಎನ್ನಿಸಿತು. ಈ ದೊಡ್ಡ ಸ್ಟಾರ್‌ಗೆ ಹೇರ್‌ಕಟ್ ಮಾಡುವಾಗ ನನ್ನಲ್ಲಿ ಅಳುಕಿತ್ತು. ದೊಡ್ಡ ಸ್ಟಾರ್ ಆದರೂ ಸಾಮಾನ್ಯ ವ್ಯಕ್ತಿಯಂತೆ ನನ್ನೊಂದಿಗೆ ನಡೆದುಕೊಂಡರು. ನನ್ನ ಹೆಸರು ಕೇಳಿಕೊಂಡರು. ಕೊನೆಯಲ್ಲಿ 800 ರೂ. ಕೊಟ್ಟರು. ಇದೆಲ್ಲ ಯಾಕೆ ಸರ್ ಎಂದೆ. ಇಟ್ಟುಕೊಳ್ಳಪ್ಪ ಎಂದರು. ಈ ಕ್ಷಣ ನನ್ನ ಜೀವನದಲ್ಲಿ ಮರೆಯಲಾರದ ಅಮೂಲ್ಯ ಕ್ಷಣ ಸರ್ ಎಂದಿದ್ದೆʼ ಎಂದು ಭಾವುಕರಾದರು.












Click it and Unblock the Notifications