Get Updates
Get notified of breaking news, exclusive insights, and must-see stories!

ರಾಜಕೀಯ ಬದ್ಧ ವೈರಿ ಶ್ರೀನಿವಾಸ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಭೇಟಿ: ಇದರ ಹಿಂದಿನ ತಂತ್ರವೇನು?

ಮೈಸೂರು, ಏಪ್ರಿಲ್‌ 14: ತವರು ಕ್ಷೇತ್ರವನ್ನು ಗೆದ್ದು ತೀರಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಕಾಲದ ಮಿತ್ರ, ಹಾಗೂ ನಂತರದ ಕಾಲಘಟ್ಟದಲ್ಲಿ ರಾಜಕೀಯ ಶತ್ರುವಾಗಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಮೇಲ್ನೋಟಕ್ಕೆ ಉಭಯಕುಶಲೋಪರಿ ಎಂಬಂತೆ ಕಾಣಿಸುತ್ತಿದ್ದರೂ ಇದರ ಹಿಂದೆ ರಾಜಕೀಯ ಉದ್ದೇಶವಿರುವುದನ್ನು ತಳ್ಳಿಹಾಕಲಾಗದು.

ಇಲ್ಲಿಯ ತನಕವೂ ಅಂತರ ಕಾಪಾಡಿಕೊಂಡು ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಯಾವತ್ತೂ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವ ಚಿಂತನೆ ಮಾಡಿರಲಿಲ್ಲ. ಆದರೆ ದಿಢೀರ್ ಆಗಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿರುವುದು ನೆಪವಾಗಿದೆಯಾದರೂ ಅದರ ಹಿಂದೆ ರಾಜಕೀಯ ತಂತ್ರ ಅಡಗಿರುವುದು ಗುಟ್ಟಾಗಿ ಉಳಿದಿಲ್ಲ. ಬಹುಶಃ ಕೆಲವು ದಿನಗಳ ಹಿಂದಕ್ಕೆ ಹೋದರೆ ಇವರ ನಡುವಿನ ವೈರತ್ವ ಹೇಗಿತ್ತು ಎಂಬುದು ಅವರ ನಡುವಿನ ಆರೋಪ ಪ್ರತ್ಯಾರೋಪಗಳನ್ನು ನೋಡಿದವರಿಗೆ ಗೊತ್ತಾಗಿ ಬಿಡುತ್ತದೆ.

Lok Sabha Election 2024 Why CM Siddaramaiah Meet BJP MP Srinivas Prasad

ಅತ್ತ ಮಂಡ್ಯದಲ್ಲಿ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜಿಯಾಗಿದ್ದರೆ, ಇತ್ತ ಮೈಸೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಹೆಚ್.ವಿಶ್ವನಾಥ್ ದ್ವೇಷ ಮರೆತು ಒಂದಾಗಿ ಹೋಗುವ ತೀರ್ಮಾನ ಮಾಡಿರುವುದು ರಾಜಕೀಯದಲ್ಲಿ ಯಾರೂ ಶತ್ರುವಲ್ಲ, ಮಿತ್ರರೂ ಅಲ್ಲ ಎಂಬುದನ್ನು ಸಾಬೀತು ಮಾಡಿದೆ. ಇದೆಲ್ಲವನ್ನು ಗಮನಿಸಿದರೆ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬಂದಿರುವುದರಲ್ಲಿ ಅಚ್ಚರಿಯೇನು ಕಾಣಿಸುವುದಿಲ್ಲ.

ಸಂಪುಟದಿಂದ ಕೈಬಿಟ್ಟಿದ್ದ ಸಿದ್ದರಾಮಯ್ಯ

ಕಳೆದ ಬಾರಿ 2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಲು ಎರಡನೇ ಬಾರಿಗೆ ಸಿಎಂ ಆಗುವ ಸಿದ್ದರಾಮಯ್ಯ ಅವರು ಕನಸು ಛಿದ್ರವಾಗುವಲ್ಲಿ ಶ್ರೀನಿವಾಸ ಪ್ರಸಾದ್ ಅವರ ಜತೆಗಿನ ಸಂಬಂಧ ಕಡಿದುಕೊಂಡಿದ್ದು ಕಾರಣ ಎಂದರೆ ತಪ್ಪಾಗಲಾರದು. 2016ರಲ್ಲಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸಂದರ್ಭ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬರೀಶ್ ಮತ್ತು ಶ್ರೀನಿವಾಸ ಪ್ರಸಾದ್ ಅವರನ್ನು ಕೈಬಿಟ್ಟಿದ್ದರು. ಅವತ್ತು ಆಕ್ರೋಶಗೊಂಡಿದ್ದ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನಿಂದ ಹೊರ ಬಂದಿದ್ದರು.

ಆ ನಂತರ ಬಿಜೆಪಿಗೆ ಸೇರ್ಪಡೆಯಾದ ಅವರು ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಇದಾದ ನಂತರ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಿದ್ದರಾಮಯ್ಯ ಅವರ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಆ ನಂತರವೂ ನಿನ್ನೆ ಮೊನ್ನೆಯವರೆಗೂ ಸಿದ್ದರಾಮಯ್ಯ ಅವರ ವಿರುದ್ಧವೇ ಹರಿಹಾಯುತ್ತಾ ಬಂದಿದ್ದರು.

Lok Sabha Election 2024 Why CM Siddaramaiah Meet BJP MP Srinivas Prasad

ದಿಢೀರ್ ಭೇಟಿ ಹಿಂದಿದೆ ರಾಜಕೀಯ ತಂತ್ರ

ಅನಾರೋಗ್ಯದ ಹಿನ್ನಲೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದ ಅವರು ಸದ್ಯ ಬಿಜೆಪಿ ಸಂಸದರಾಗಿ ಮುಂದುವರೆದಿದ್ದಾರೆ. ತಮ್ಮ ಇಬ್ಬರು ಅಳಿಯಂದಿರ ಪೈಕಿ ಯಾರಿಗಾದರೊಬ್ಬರಿಗೆ ಚಾಮರಾಜನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಗಬಹುದೆಂದು ನಂಬಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಸೊಪ್ಪು ಹಾಕದ್ದು ಶ್ರೀನಿವಾಸ ಪ್ರಸಾದ್ ಅವರಲ್ಲಿ ಬೇಸರ ತರಿಸಿತ್ತು. ಹೀಗಾಗಿಯೇ ಇಬ್ಬರು ಅಳಿಯಂದಿರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಜತೆಗೆ ಶ್ರೀನಿವಾಸ ಪ್ರಸಾದ್ ವಿಶ್ವಾಸಗಳಿಸುವ ಸಲುವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ನಾಯಕರು ಅವರ ಮನೆಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಬಂದಿದ್ದರು.

ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯ ಮತ್ತು ವಿ.ಶ್ರೀನಿವಾಸಪ್ರಸಾದ್ ಅಂತರ ಕಾಪಾಡಿಕೊಂಡು ಬಂದಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ನಾನು ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಲ್ಲ ಎಂದಿದ್ದರು. ಶ್ರೀನಿವಾಸಪ್ರಸಾದ್ ಮನೆಗೆ ಹೋಗದಿದ್ದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಅವರನ್ನು ಭೇಟಿ ಮಾಡುವಂತೆ ಸ್ಥಳೀಯ ನಾಯಕರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಇದೀಗ ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕೈ ಅಭ್ಯರ್ಥಿಗಳ ಬೆಂಬಲಿಸಲು ಮನವಿ

ಉಭಯ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸುನೀಲ್ ಬೋಸ್ ಅವರನ್ನು ಬೆಂಬಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇಂತಹದೊಂದು ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಂದಿದ್ದೇಕೆ ಎಂದರೆ, ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸ ಪ್ರಸಾದ್ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಅವರ ವಿಶ್ವಾಸಗಳಿಸಿದರೆ ದಲಿತ ಮತ ಪಡೆಯಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ಭೇಟಿ ನಡೆದಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+